×
Ad

ಮುಹಮ್ಮದ್ ಶಮಿಗೆ ಅವಕಾಶದ ಬಾಗಿಲು ಮುಚ್ಚಬಾರದು: ಇರ್ಫಾನ್ ಪಠಾಣ್

Update: 2026-01-04 23:24 IST

ಇರ್ಫಾನ್ ಪಠಾಣ್ ,  ಮುಹಮ್ಮದ್ ಶಮಿ | Photo Credit : PTI 

ಹೊಸದಿಲ್ಲಿ, ಜ.4: ವಿಜಯ್ ಹಝಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ ಏಕದಿನ ತಂಡದಿಂದ ಕಡೆಗಣಿಸಲ್ಪಟ್ಟಿರುವ ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿಗೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಶನಿವಾರ ಪ್ರಕಟಿಸಲಾದ ಭಾರತೀಯ ತಂಡದಲ್ಲಿ 35 ವರ್ಷದ ಶಮಿಗೆ ಸ್ಥಾನ ನೀಡಲಾಗಿಲ್ಲ. ಇದರಿಂದ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.

2025ರಲ್ಲಿ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡವನ್ನು ಪ್ರತಿನಿಧಿಸಿದ ಬಳಿಕ ಶಮಿ ಟೀಮ್ ಇಂಡಿಯಾಗೆ ವಾಪಸಾಗಿಲ್ಲ. ಗಾಯದಿಂದ ಚೇತರಿಸಿಕೊಂಡು ಸ್ಪರ್ಧಾತ್ಮಕ ಕ್ರಿಕೆಟ್‌ ಗೆ ಮರಳಿದ್ದರೂ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಳು ಹಾಗೂ ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಳ ಆಯ್ಕೆ ವೇಳೆ ಅವರನ್ನು ಪರಿಗಣಿಸಲಾಗಿಲ್ಲ.

‘‘ಮುಹಮ್ಮದ್ ಶಮಿ ಅವರ ಭವಿಷ್ಯವೇನು ಎಂಬುದು ಈಗ ಅತಿದೊಡ್ಡ ಚರ್ಚೆಯ ವಿಷಯ. ಅವರು ನಿನ್ನೆ ಮೊನ್ನೆ ಬಂದು ಕೆಲ ಪಂದ್ಯಗಳನ್ನು ಆಡಿದವರು ಅಲ್ಲ. ಅವರು 450–500 ಅಂತಾರಾಷ್ಟ್ರೀಯ ವಿಕೆಟ್‌ ಗಳನ್ನು ಪಡೆದಿದ್ದಾರೆ. ಅದು ದೊಡ್ಡ ಸಂಖ್ಯೆ. ನೀವು ಕ್ರಿಕೆಟ್ ಆಡುತ್ತಿರುವವರೆಗೆ ನಿಮ್ಮನ್ನು ಸಾಬೀತುಪಡಿಸುತ್ತಲೇ ಇರಬೇಕು’’ ಎಂದು ಪಠಾಣ್ ತಮ್ಮ ಯೂಟ್ಯೂಬ್ ಚಾನೆಲ್‌ ನಲ್ಲಿ ಹೇಳಿದ್ದಾರೆ.

‘‘ದೇಶೀಯ ಕ್ರಿಕೆಟ್ ಪ್ರದರ್ಶನದ ಬಗ್ಗೆ ಚರ್ಚೆ ನಡೆಯುತ್ತದೆ. ಐಪಿಎಲ್‌ನಲ್ಲಿ ನೀವು ನಿಮ್ಮ ಹಳೆಯ ಲಯ ಹಾಗೂ ಫಿಟ್ನೆಸ್ ತೋರಿಸಿದರೆ ಯಾರೂ ನಿಮ್ಮನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇಡೀ ಜಗತ್ತು ಐಪಿಎಲ್ ಅನ್ನು ವೀಕ್ಷಿಸುತ್ತದೆ. ಅಲ್ಲಿ ನೀವು ಪ್ರದರ್ಶನ ನೀಡಿದರೆ ಮತ್ತೆ ತಂಡದಲ್ಲಿ ಸ್ಥಾನ ಪಡೆಯಬಹುದು. ಶಮಿಗೆ ಅವಕಾಶದ ಬಾಗಿಲು ಮುಚ್ಚಬಾರದು’’ ಎಂದು ಅವರು ಅಭಿಪ್ರಾಯಪಟ್ಟರು.

‘‘ಶಮಿ ಈಗಾಗಲೇ 200 ಓವರ್‌ ಗಳ ಬೌಲಿಂಗ್ ಮಾಡಿದ್ದಾರೆ. ಇಷ್ಟೊಂದು ಓವರ್‌ಗಳ ಬಳಿಕವೂ ಫಿಟ್ನೆಸ್ ಪ್ರಶ್ನೆ ಏಕೆ ಉದ್ಭವಿಸಬೇಕು? ಅವರು ಇನ್ನೇನು ಸುಧಾರಿಸಬೇಕು? ಆಯ್ಕೆ ಸಮಿತಿಯ ಯೋಚನೆ ಅವರಿಗೆ ಮಾತ್ರ ಗೊತ್ತು. ನಾನು ಶಮಿ ಸ್ಥಾನದಲ್ಲಿದ್ದರೆ ಐಪಿಎಲ್‌ ಗೆ ಹೋಗಿ ನನ್ನ ಸಾಮರ್ಥ್ಯವನ್ನು ತೋರಿಸುತ್ತಿದ್ದೆ’’ ಎಂದರು.

ಭಾರತ ತಂಡವು ಜನವರಿ 11ರಿಂದ ನ್ಯೂಜಿಲ್ಯಾಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಆ ಬಳಿಕ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News