Photo: x.com/LaRazon_mx

ವಾಷಿಂಗ್ಟನ್: ಯುಎಸ್ ಓಪನ್ ಮಹಿಳೆಯರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಟೆನಿಸ್ ದಿಗ್ಗಜ ಸಹೋದರಿಯರಾದ ಸೆರೆನಾ ವಿಲಿಯಮ್ಸ್ ಹಾಗೂ ವೀನಸ್ ವಿಲಿಯಮ್ಸ್ ಅವರು ಪ್ರಬಲ ಹೋರಾಟದ ನಡುವೆಯೂ ಸೋತು ಹೊರಬಿದ್ದಿದ್ದಾರೆ.

3 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಹೋರಾಟದಲ್ಲಿ, 14ನೇ ಶ್ರೇಯಾಂಕದ ಮಾಯಾ ಜಾಯಿಂಟ್ ಮತ್ತು ಚಾನ್ ಹಾವೊ-ಚಿಂಗ್ ಜೋಡಿಯ ವಿರುದ್ಧ ಸೆರೆನಾ-ವೀನಸ್ ಜೋಡಿ 3-6, 7-6(6), 7-10 ಸೆಟ್‌ಗಳಿಂದ ಸೋಲು ಕಂಡಿತು.

ಒಟ್ಟಾಗಿ 14 ಗ್ರ್ಯಾಂಡ್‌ಸ್ಲಾಮ್ ಮಹಿಳಾ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಈ ಜೋಡಿ, 2022ರ ಬಳಿಕ ಇದೇ ಮೊದಲ ಬಾರಿಗೆ ಜೋಡಿಯಾಗಿ ಕಣಕ್ಕಿಳಿದಿತ್ತು. ಇತ್ತೀಚೆಗಷ್ಟೇ ವೃತ್ತಿಪರ ಟೆನಿಸ್‌ಗೆ ಮರಳಿದ್ದ ಸೆರೆನಾ ಅವರಿಗೆ, ಸಹೋದರಿ ವೀನಸ್ ಅವರೊಂದಿಗೆ ಆಡಲು ಯುಎಸ್ ಓಪನ್ ಆಯೋಜಕರು ವೈಲ್ಡ್‌ಕಾರ್ಡ್ ಪ್ರವೇಶ ನೀಡಿದ್ದರು.

ಆರಂಭದಲ್ಲಿ ಮುನ್ನಡೆ ಸಾಧಿಸಿದ ಜಾಯಿಂಟ್ ಮತ್ತು ಚಾನ್, ಮೊದಲ ಸೆಟ್ ಅನ್ನು 6-3ರಿಂದ ಗೆದ್ದುಕೊಂಡರು. ಆದರೆ ಬಳಿಕ ಲಯ ಕಂಡುಕೊಂಡ ವಿಲಿಯಮ್ಸ್ ಸಹೋದರಿಯರು ಕಮ್‌ಬ್ಯಾಕ್ ಮಾಡಿದರು.

ಎರಡನೇ ಸೆಟ್‌ನಲ್ಲಿ ತೀವ್ರ ಜಿದ್ದಾಜಿದ್ದಿ ಏರ್ಪಟ್ಟು ಟೈ-ಬ್ರೇಕರ್‌ಗೆ ಹೋಯಿತು. ಸ್ಥಳೀಯ ಪ್ರೇಕ್ಷಕರ ಭಾರಿ ಬೆಂಬಲದ ನಡುವೆ ಒತ್ತಡವನ್ನು ನಿಭಾಯಿಸಿದ ಸೆರೆನಾ ಮತ್ತು ವೀನಸ್ ಜೋಡಿ, ಟೈ-ಬ್ರೇಕರ್‌ನಲ್ಲಿ 8-6ರಿಂದ ಗೆದ್ದು ಪಂದ್ಯವನ್ನು ಮೂರನೇ ಹಾಗೂ ನಿರ್ಣಾಯಕ ಸೆಟ್‌ಗೆ ಕೊಂಡೊಯ್ದರು.

ಮೂರನೇ ಸೆಟ್‌ನಲ್ಲಿ ಜಾಯಿಂಟ್ ಮತ್ತು ಚಾನ್ 4-1ರ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲಿಟ್ಟರು. ಆದರೆ ಅನುಭವದ ಆಟಕ್ಕೆ ಮೊರೆ ಹೋದ ವಿಲಿಯಮ್ಸ್ ಸಹೋದರಿಯರು ಸುಲಭವಾಗಿ ಶರಣಾಗಲಿಲ್ಲ. 7ನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದ ಸೆರೆನಾ-ವೀನಸ್ ಜೋಡಿ, ಬಳಿಕ ತಮ್ಮ ಸರ್ವ್‌ನ್ನೂ ಉಳಿಸಿಕೊಂಡು ಪಂದ್ಯಕ್ಕೆ ಮತ್ತೆ ಜೀವ ತುಂಬಿತು.

ವಿಶೇಷವಾಗಿ ನೆಟ್ ಬಳಿ 44 ವರ್ಷದ ಸೆರೆನಾ ಅವರ ಆಕ್ರಮಣಕಾರಿ ಆಟ ಎದುರಾಳಿಗಳಿಗೆ ಕಠಿಣ ಸವಾಲಾಗಿ ಪರಿಣಮಿಸಿತು. ಪ್ರತಿ ಪಾಯಿಂಟ್‌ಗೂ ತೀವ್ರ ಪೈಪೋಟಿ ಏರ್ಪಟ್ಟ ಪರಿಣಾಮ ಪಂದ್ಯ ರೋಚಕ ಘಟ್ಟ ತಲುಪಿತು. ಅಂತಿಮವಾಗಿ ಎರಡೂ ಜೋಡಿಗಳು ತಮ್ಮ ಸರ್ವ್‌ಗಳನ್ನು ಉಳಿಸಿಕೊಂಡಿದ್ದರಿಂದ ಮೂರನೇ ಸೆಟ್ 10-ಪಾಯಿಂಟ್ ಮ್ಯಾಚ್ ಟೈ-ಬ್ರೇಕರ್‌ಗೆ ಸಾಗಿತು.

ವಿಲಿಯಮ್ಸ್ ಸಹೋದರಿಯರಿಂದಾದ ಒಂದೆರಡು ಡಬಲ್ ಫಾಲ್ಟ್‌ಗಳ ಲಾಭ ಪಡೆದ ಜಾಯಿಂಟ್ ಮತ್ತು ಚಾನ್, ಅಂತರವನ್ನು ನಿಧಾನವಾಗಿ ತಗ್ಗಿಸುತ್ತಾ ಮುನ್ನಡೆದರು. ನಿರ್ಣಾಯಕ ಕ್ಷಣಗಳಲ್ಲಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ 14ನೇ ಶ್ರೇಯಾಂಕದ ಜೋಡಿ, ಅಂತಿಮವಾಗಿ ಮ್ಯಾಚ್ ಟೈ-ಬ್ರೇಕರ್ ಅನ್ನು 10-7ರಿಂದ ಗೆದ್ದು ರೋಚಕ ಜಯ ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor