×
Ad

ವಕ್ಫ್ ಮಂಡಳಿಗೆ ಮುಸ್ಲಿಂ ವಿವಾಹ ನೋಂದಣಿ ಅಧಿಕಾರ; ಆದೇಶ ಹಿಂಪಡೆದ ಸರಕಾರ, ಪಿಐಎಲ್ ಇತ್ಯರ್ಥ

Update: 2025-10-09 20:26 IST

ಬೆಂಗಳೂರು: ಮುಸ್ಲಿಮರ ವಿವಾಹ ನೋಂದಣಿ ಹಾಗೂ ಮುಸ್ಲಿಂ ದಂಪತಿಗೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಅಧಿಕಾರವನ್ನು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಗೆ ನೀಡಿ 2023ರ ಆಗಸ್ಟ್ 30ರಂದು ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ಆಲಂ ಪಾಷಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ, ಮುಸ್ಲಿಂ ಸಮುದಾಯದ ವಿವಾಹ ನೋಂದಣಿ ಹಾಗೂ ವಿವಾಹಿತ ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ನೀಡುವ ಅಧಿಕಾರವನ್ನು ರಾಜ್ಯ ವಕ್ಫ್‌ ಮಂಡಳಿಗೆ ನೀಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಯ ಮೂಲಕ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ಸರಕಾರದ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಪಿಐಎಲ್ ಇತ್ಯರ್ಥಪಡಿಸಿತು. 2024ರ ನವೆಂಬರ್ 21ರಂದು ಹೈಕೋರ್ಟ್ ಸರಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅರ್ಜಿದಾರರ ಮನವಿ:

ವಕ್ಫ್‌ ಕಾಯ್ದೆ-1995ರ ಅನ್ವಯ ವಕ್ಫ್‌ ಆಸ್ತಿಗಳ ಸಂರಕ್ಷಣೆ ಮತ್ತು ನಿರ್ವಹಣೆ ಮಾಡುವುದು ವಕ್ಫ್‌ ಮಂಡಳಿಯ ಕಾರ್ಯವ್ಯಾಪ್ತಿಯಾಗಿದೆ. ಕರ್ನಾಟಕ ವಿವಾಹ ನೋಂದಣಿ ಕಾಯ್ದೆ-1976ರ ಪ್ರಕಾರ ಉಪ ನೋಂದಣಾಧಿಕಾರಿಗೆ ವಿವಾಹ ನೋಂದಣಿ ಅಧಿಕಾರವಿದೆ. ಮುಸ್ಲಿಮರಿಗೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಸಂಬಂಧ 2009ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ 2011ರಲ್ಲಿ ರದ್ದುಪಡಿಸಿದೆ. ಇದಾದ ಬಳಿಕ ಸರಕಾರ ಪರಿಷ್ಕೃತ ಆದೇಶಗಳನ್ನು ಹೊರಡಿಸಿದೆ. ಈಗಾಗಲೇ ಉಪ ನೋಂದಣಾಧಿಕಾರಿಗಳ ಬಳಿ ವಿವಾಹ ನೋಂದಣಿಗೆ ಅವಕಾಶವಿದೆ. ಅಲ್ಲದೇ ಸ್ಥಳೀಯ ಖಾಜಿಗಳ ಬಳಿಯೂ ವಿವಾಹ ದಾಖಲೆ ಇರಲಿದೆ. ಅದಾಗ್ಯೂ ವಿವಾಹ ನೋಂದಣಿ ಮತ್ತು ವಿವಾಹ ಪ್ರಮಾಣಪತ್ರ ನೀಡುವ ಅಧಿಕಾರವನ್ನು ವಕ್ಫ್‌ ಮಂಡಳಿಗೆ ನೀಡುವ ಮೂಲಕ ಮೂರನೇ ವ್ಯವಸ್ಥೆಯೊಂದನ್ನು ಹುಟ್ಟು ಹಾಕಲಾಗಿದೆ. ಸರಕಾರದ ಆದೇಶ ವಕ್ಫ್‌ ಕಾಯ್ದೆ-1995 ಹಾಗೂ ಸಂವಿಧಾನದ ಪರಿಚ್ಛೇದ 14ಕ್ಕೆ ತದ್ವಿರುದ್ಧವಾಗಿದೆ. ಆದ್ದರಿಂದ, ಅದನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News