×
Ad

ಹತ್ತು ವರ್ಷದ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲಿ: ಬಸವರಾಜ ಬೊಮ್ಮಾಯಿ

Update: 2023-07-05 19:05 IST

ಬೆಂಗಳೂರು, ಜು. 5: ‘2013ರಿಂದ 2023ರ ವರೆಗೆ ಕೇಳಿ ಬಂದ ಎಲ್ಲ ಭ್ರಷ್ಟಾಚಾರ ಹಗರಣಗಳ ತನಿಖೆ ನಡೆಸಲಿ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರಕಾರದ ಅವಧಿಯಲ್ಲಿನ ಶೇ.40ರಷ್ಟು ಕಮಿಷನ್ ಪ್ರಕರಣವನ್ನು ಸರಕಾರದ ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಿದೆ. ಕಾಂಗ್ರೆಸ್‍ನವರು ಒಂದೂವರೆ ವರ್ಷದಿಂದ ಆರೋಪ ಮಾಡುತ್ತಿದ್ದಾರೆ. ಇಲ್ಲಿಯ ವರೆಗೂ ದಾಖಲೆ ಕೊಟ್ಟಿಲ್ಲ. ತನಿಖೆ ಮಾಡಿದರೆ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದು ಹೇಳಿದರು.

‘ಸರಕಾರ ನಿಜವಾಗಲೂ ಭ್ರಷ್ಟಾಚಾರ ವಿರುದ್ಧ ಇದ್ದರೆ, 2013ರಿಂದ 2023ರ ಮಾರ್ಚ್ ವರೆಗಿನ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ಮಾಡಬೇಕು. ಕೇವಲ ಸೆಲೆಕ್ಟಿವ್ ಆಗಿ ರಾಜಕೀಯ ಪ್ರೇರಿತವಾಗಿ ತನಿಖೆ ಮಾಡಿದರೆ ಹೇಗೆ?. ಯಾರು ಯಾರು ತಪ್ಪಿತಸ್ಥರು ಇದ್ದಾರೆಯೋ ಅವರಿಗೆಲ್ಲಾ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

‘ಈಗಾಗಲೇ ಹಲವು ಪ್ರಕರಣಗಳು ಲೋಕಾಯುಕ್ತದ ಮುಂದೆ ಇವೆ. ಜತೆಗೆ ಬಿಬಿಎಂಪಿ ಇತರ ಇಲಾಖೆ ವಿರುದ್ಧದ ಶೇ.40 ಕಮಿಷನ್ ಕುರಿತಾದ ಪ್ರಕರಣಗಳು ಲೋಕಾಯುಕ್ತಾದಲ್ಲಿವೆ. ಅವುಗಳನ್ನು ತನಿಖೆ ನಡೆಸಲಿ. ಗುತ್ತಿಗೆದಾರದ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ವಿರುದ್ಧ ಮುನಿರತ್ನ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇನ್ನೂ ಅದಕ್ಕೆ ಅವರು ದಾಖಲೆಯಾಗಲಿ, ಉತ್ತರವಾಗಲಿ ನೀಡಿಲ್ಲ ಎಂದು ಬೊಮ್ಮಾಯಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News