Bengaluru | ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ; ನಿಲ್ಲದ ಪ್ರಯಾಣಿಕರ ಸಂಕಷ್ಟ
ಬೆಂಗಳೂರು : ತಾಂತ್ರಿಕ ಕಾರಣದಿಂದಾಗಿ ‘ಇಂಡಿಗೋ’ ವಿಮಾನಯಾನ ಸಂಸ್ಥೆಯ ವಿಮಾನಗಳ ಹಾರಾಟದಲ್ಲಿ ಸತತ ನಾಲ್ಕನೇ ದಿನವೂ ವ್ಯತ್ಯಯವಾಗಿದ್ದು, ಇದರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕರು 12 ತಾಸು ಕಾದು ಕಾದು ಸುಸ್ತಾಗಿ, ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಮಾಹಿತಿ ಪ್ರಕಾರ ಶುಕ್ರವಾರ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 102 ವಿಮಾನ ಹಾರಾಟ ರದ್ದಾಗಿದೆ. 52 ಆಗಮನ ಮತ್ತು 50 ನಿರ್ಗಮನ ವಿಮಾನಗಳು ರದ್ದಾಗಿರುವುದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಾಸುಗಟ್ಟಲೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಇತ್ತ ಸೂಕ್ತ ಮಾಹಿತಿ ನೀಡದ ಇಂಡಿಗೋ ಸಂಸ್ಥೆ ವಿರುದ್ಧ ಪ್ರಯಾಣಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿನ ಸನ್ನಿವೇಶ ಕುರಿತು ಮಾಹಿತಿ ನೀಡಿ ತೀವ್ರ ಬೇಸರ ವ್ಯಕ್ತಪಡಿಸಿದರು.
ನಿತೀನ್ ಮಲ್ಪಾನಿ ಎಂಬವರು ಈ ಕುರಿತು ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಇಂಡಿಗೋ ಸಿಬ್ಬಂದಿಗಳೇ ನೀವು ಏನು ಮಾಡುತ್ತಿದ್ದಿರಾ? ಕಳೆದ ರಾತ್ರಿ 8 ಗಂಟೆಯಿಂದ ಈಗಿನವರೆಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಇದ್ದೀವೆ. ಸರಳವಾಗಿ ಸಿಬ್ಬಂದಿಯ ಕೆಲಸದ ಅವಧಿ ವೇಳಾಪಟ್ಟಿ ಬದಲಾಯಿಸಲು ಮಕ್ಕಳು, ವೃದ್ಧರು, ರೋಗಿಗಳ ಜೊತೆ ಆಟವಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯದಿಂದ ದೇಶಾದ್ಯಂತ 500ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. 4ನೇ ದಿನವೂ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಕಾದು ಕಾದು ಸುಸ್ತಾಗಿ ಎಲ್ಲೆಂದರಲ್ಲಿ ನಿದ್ದೆ ಮಾಡುತ್ತಿರುವ ಪ್ರಯಾಣಿಕರು, ಒಳಗೆ ಇರಲಾಗದೇ ಹೊರಗೂ ಬರಲಾಗದ ಸ್ಥಿತಿ ಅನುಭವಿಸಿದ್ದಾರೆ.
ವಿಮಾನಕ್ಕಾಗಿ ಕಾದು ಕಾದು ಸುಸ್ತಾದ ಪ್ರಯಾಣಿಕರ ತಂಡವೊಂದು ವಿಮಾನ ನಿಲ್ದಾಣದಲ್ಲಿಯೇ ಭಜನೆ ಮಾಡುತ್ತಾ ಸಮಯ ಕಳೆಯುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಮಾನ ದರ ದುಪ್ಪಟ್ಟು: ಶುಕ್ರವಾರ ಪ್ರಮುಖ ನಗರಗಳಿಗೆ ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಿದಾಗ, ಇತರೆ ವಿಮಾನ ಕಂಪೆನಿಗಳು, ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸುವ ದರಗಳನ್ನು ನಿಗದಿಪಡಿಸಿವೆ. ಹೊಸದಿಲ್ಲಿ- ಚೆನ್ನೈ ಏಕಮುಖ ಟಿಕೆಟ್ 65,985 ರೂಪಾಯಿಗಳಿಗೆ ಏರಿಕೆ ಕಂಡಿತು.
ಇತ್ತ ಮುಂಬೈ ಮಾರ್ಗವು ಒಂದೇ ಪ್ರಯಾಣಕ್ಕೆ 38,676 ರೂ.ಗಳಿಗೆ ಏರಿತು. ಹೊಸದಿಲ್ಲಿ-ಕೋಲ್ಕತ್ತಾ ಮಾರ್ಗವು ಸಹ 38,699 ರೂ., ದಾಟಿದೆ. ಕೇವಲ ಬೆರಳೆಣಿಕೆಯಷ್ಟು ಸೀಟುಗಳು ಮಾತ್ರ ಉಳಿದಿವೆ.
ಇನ್ನೂ ಶನಿವಾರ ಸಂಜೆ 7.30ಕ್ಕೆ ಬೆಂಗಳೂರಿನಿಂದ ಹೊಸದಿಲ್ಲಿಗೆ ಹೋಗುವ ಏರ್ ಇಂಡಿಯಾ ವಿಮಾನದ ಟಿಕೆಟ್ ದರ 33,838 ರೂಪಾಯಿಗೆ ಏರಿಕೆಯಾಗಿದೆ ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.