ಕೆಎಸ್‍ಡಿಎಲ್ ವಿರುದ್ಧ ಅಕ್ರಮದ ಆರೋಪ | ಹುರುಳಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಎಂ.ಬಿ.ಪಾಟೀಲ್
"ಶಾಸಕರು ತಮ್ಮ ಆರೋಪಗಳಿಗೆ ಪುರಾವೆ ಕೊಡಬೇಕು, ಇದಕ್ಕೆ ತಪ್ಪಿದರೆ ಅವರ ವಿರುದ್ಧ ಕ್ರಮ ನಿಶ್ಚಿತ"
ಎಂ.ಬಿ.ಪಾಟೀಲ್
ಬೆಂಗಳೂರು : ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ (ಕೆಎಸ್‍ಡಿಎಲ್) ಸಂಸ್ಥೆಯಲ್ಲಿ ಸಾಮಗ್ರಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಜೆಡಿಎಸ್ ಶಾಸಕ ಎಚ್.ಟಿ. ಮಂಜು ಆರೋಪಿಸಿದ್ದಾರೆ. ಇದರಲ್ಲಿ ಹುರುಳಿದ್ದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲದೆ ಹೋದರೆ ಮಂಜು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಎಸ್‍ಡಿಎಲ್ ಸಂಸ್ಥೆಯನ್ನು ಪುನಃ ಹಿಂದಿನಂತೆ ಹಳ್ಳ ಹಿಡಿಸುವ ಪ್ರಯತ್ನ ಇದು, ಇದಕ್ಕೆ ಜಗ್ಗುವುದಿಲ್ಲ. ಶಾಸಕರು ತಮ್ಮ ಆರೋಪಗಳಿಗೆ ಪುರಾವೆ ಕೊಡಬೇಕು. ಇದಕ್ಕೆ ತಪ್ಪಿದರೆ ಅವರ ವಿರುದ್ಧ ಕ್ರಮ ನಿಶ್ಚಿತ ಎಂದು ಹೇಳಿದರು.
ಕೆಎಸ್‍ಡಿಎಲ್ ಹಿಂದೆ ಹೇಗಿತ್ತು, ಈಗ ಹೇಗಿದೆ ಎನ್ನುವುದು ಪ್ರಪಂಚಕ್ಕೇ ಗೊತ್ತಿದೆ. ಟೆಂಡರ್ ಇತ್ಯಾದಿಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇದೆ. ಇದರಲ್ಲಿ ಯಾರ ಪಾತ್ರವೂ ಇರುವುದಿಲ್ಲ. ನಮ್ಮ ವ್ಯವಸ್ಥೆಯಲ್ಲಿ ಇನ್ನೂ ಒಂದಿಷ್ಟು ತಿಮಿಂಗಿಲಗಳಿವೆ. ಅವುಗಳನ್ನು ಆಚೆಗೆ ಹಾಕಲಾಗುವುದು. ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.