ರಾಜ್ಯದಲ್ಲಿ ಶೇ.60ರಷ್ಟು ಮಳೆ ಕೊರತೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Update: 2026-07-19 19:26 IST

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಶೇ.60ರಷ್ಟು ಮಳೆ ಕೊರತೆ ಇದ್ದು, 178 ತಾಲೂಕುಗಳಲ್ಲಿ ಮಳೆ ಕೊರತೆಯುಂಟಾಗಿದೆ. 20 ತಾಲೂಕುಗಳಲ್ಲಿ ಮಳೆಯೇ ಆಗಿಲ್ಲ. ವಿಜಯನಗರ ಜಿಲ್ಲೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ರವಿವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳೊಂದಿಗೆ ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಅಗತ್ಯ ಮೇವು, ಉದ್ಯೋಗ ಸೃಜನೆ ಸೇರಿದಂತೆ ಪರಿಹಾರ ಕ್ರಮಗಳ ಕುರಿತು ವಿಡಿಯೋ ಸಂವಾದ, ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಈಗಾಗಲೇ ಗ್ರಾಮೀಣ ಭಾಗದ ಕ್ಷೇತ್ರಗಳಿಗೆ ಕುಡಿಯುವ ನೀರಿಗಾಗಿ ತಲಾ 1 ಕೋಟಿ ರೂ.ಅನುದಾನ ಘೋಷಣೆ ಮಾಡಲಾಗಿದೆ. ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಶಾಸಕರ ನೇತೃತ್ವದಲ್ಲಿ ಸಭೆ ಮಾಡಿ ಹಣ ಬಳಕೆಗೆ ಸೂಚಿಸಲಾಗಿದೆ ಎಂದರು.

ಜಲಾಶಯಗಳಲ್ಲಿ ಶೇ.40ರಷ್ಟು ಮಾತ್ರ ನೀರಿನ ಶೇಖರಣೆಯಾಗಿದ್ದು, ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಬೇಕು. ಅಣೆಕಟ್ಟುಗಳಲ್ಲಿ ನೀರು ಬಂದರೆ ಮಾತ್ರ ಸಮಿತಿಗಳು ಸಭೆ ಮಾಡಬೇಕು. ನೀರಿನ ಪ್ರಮಾಣದ ಬಗ್ಗೆ ಸಮಿತಿಯವರು ಆಗಾಗ್ಗೆ ರೈತರಿಗೆ ಮನದಟ್ಟು ಮಾಡಬೇಕು. ಬೆಳೆ ಹಾಕಿ ನೀರು ಬಿಡಿ ಎಂದರೆ ಬಿಡಲು ಕಷ್ಟವಾಗುತ್ತದೆ. ಹೀಗಾಗಿ ಜಲಾಶಯಗಳನ್ನು ನಂಬಿಕೊಂಡು ಯಾರೂ ಬೆಳೆ ಹಾಕಬಾರದು ಎಂದು ಅವರು ಮನವಿ ಮಾಡಿದರು.

ಎಲ್ಲ ತಾಲೂಕುಗಳಲ್ಲಿ ಅಂತರ್ಜಲ ಪ್ರಮಾಣದ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಕೆರೆಗಳಲ್ಲಿ ನೀರಿನ ಮಟ್ಟ ಕುಸಿದಿದೆ. 3,817ಸಣ್ಣ ನೀರಾವರಿ ಕೆರೆಗಳ ಪೈಕಿ, 3,235 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರಿದೆ. 32,504 ಜಿಲ್ಲಾ ಪಂಚಾಯ್ತಿ ಕೆರೆಗಳ ಪೈಕಿ, 27,450 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರಿದೆ ಎಂದು ಅವರು ತಿಳಿಸಿದರು.

ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಇರಬೇಕು. ಯಾವುದೇ ಕೆಲಸ ಆಗಬೇಕಾದರೂ ಖುದ್ದಾಗಿ ಇರಬೇಕು. ಬೆಳೆ ವಿಮೆ ವಿಚಾರವಾಗಿ ಎಲ್ಲೆಲ್ಲಿ ಅನ್ಯಾಯ ಆಗಿದೆ ಎಂದು ಪ್ರತ್ಯೇಕ ಸಭೆ ಮಾಡಿ ಪರಿಶೀಲನೆ ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News