ರಾಜ್ಯದ 178 ತಾಲೂಕುಗಳಲ್ಲಿ ಮಳೆ ಕೊರತೆ: ಸಿಎಂ ಡಿ.ಕೆ. ಶಿವಕುಮಾರ್
ʼಜಲಾಶಯಗಳಲ್ಲಿ 40% ನೀರು ಸಂಗ್ರಹ; ಕುಡಿಯಲು ಮಾತ್ರ ಬಳಕೆʼ
ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: "ರಾಜ್ಯದಲ್ಲಿ 60% ಮಳೆ ಕೊರತೆ ಎದುರಾಗಿದ್ದು, 178 ತಾಲೂಕುಗಳಲ್ಲಿ ಮಳೆ ಕೊರತೆ ಇದ್ದು, 158 ತಾಲೂಕುಗಳಲ್ಲಿ ತೀರಾ ಸಾಧಾರಣ ಮಳೆಯಾಗಿದೆ. 20 ತಾಲೂಕುಗಳಲ್ಲಿ ಮಳೆ ಆಗಿಲ್ಲ. ವಿಜಯನಗರ ಜಿಲ್ಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಬರ ಪರಿಸ್ಥಿತಿ ಕುರಿತ ಜಿಲ್ಲಾಧಿಕಾರಿ ಹಾಗೂ ಸಿಇಒ ಸಭೆ ಹಾಗೂ ವಿಶೇಷ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ರವಿವಾರ ಮಾತನಾಡಿದರು.
"ಇಂದು ಬರದ ಪರಿಸ್ಥಿತಿ ಕುರಿತು ವಿವಿಧ ಇಲಾಖೆಗಳ ಜೊತೆಗೆ ಚರ್ಚೆ ಮಾಡಿದ್ದೇವೆ. ಎಲ್ಲರೂ ಒಟ್ಟಾಗಿ ಟೀಮ್ ಕರ್ನಾಟಕವಾಗಿ ಕಾರ್ಯನಿರ್ವಹಿಸಲು ಸೂಚಿಸಿದ್ದೇನೆ. ಈ ಎಲ್ಲಾ ಅಂಶಗಳ ಬಗ್ಗೆ ಚರ್ಚೆ ಮಾಡಲಾಗಿದೆ. ರಾಜ್ಯದ ಜಲಾಶಯ 40% ಮಾತ್ರ ನೀರು ಶೇಖರಣೆಯಾಗಿದ್ದು, ಕೇವಲ ಕುಡಿಯುವ ನೀರಿಗೆ ಮಾತ್ರ ಬಳಸಲಾಗುವುದು" ಎಂದು ವಿವರಿಸಿದರು.
"ಅಣೆಕಟ್ಟುಗಳಲ್ಲಿ ನೀರು ಬಂದರೆ ಮಾತ್ರ ಸಮಿತಿಗಳು ಸಭೆ ಮಾಡಬೇಕು. ನೀರಿನ ಪ್ರಮಾಣದ ಬಗ್ಗೆ ಸಮಿತಿಯವರು ಆಗಾಗ್ಗೆ ರೈತರಿಗೆ ಮನದಟ್ಟು ಮಾಡಬೇಕು. ಬೆಳೆ ಹಾಕಿ ನೀರು ಬಿಡಿ ಎಂದರೆ ಬಿಡಲು ಕಷ್ಟವಾಗುತ್ತದೆ. ಹೀಗಾಗಿ ಬೆಳೆ ಹಾಕಬಾರದು ಎಂದು ಮನವಿ ಮಾಡುತ್ತೇವೆ" ಎಂದರು.
"ಜಲ ವಿದ್ಯುತ್ ಕೇವಲ 23% ಮಾತ್ರ ಇದೆ. ಎಲ್ಲಾ ತಾಲೂಕುಗಳಲ್ಲಿ ಅಂತರ್ಜಲ ಪ್ರಮಾಣದ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಕೆರೆಗಳಲ್ಲಿ ನೀರಿನ ಮಟ್ಟ ಕುಸಿದಿದೆ. 3,817 ಸಣ್ಣ ನೀರಾವರಿ ಕೆರೆಗಳ ಪೈಕಿ, 3,235 ಕೆರೆಗಳಲ್ಲಿ 50%ಗಿಂತ ಕಡಿಮೆ ನೀರಿದೆ. 32,504 ಜಿಲ್ಲಾ ಪಂಚಾಯ್ತಿ ಕೆರೆಗಳ ಪೈಕಿ, 27,450 ಕೆರೆಗಳಲ್ಲಿ 50%ಗಿಂತ ಕಡಿಮೆ ನೀರಿದೆ. ಈಗಾಗಲೇ ಗ್ರಾಮೀಣ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಕುಡಿಯುವ ನೀರಿಗಾಗಿ ತಲಾ 1 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. 379 ಕೋಟಿ ಹಣವನ್ನು ನೀಡಲಾಗಿದೆ. ಹಣದ ಕೊರತೆ ಇಲ್ಲ. ಶಾಸಕರ ನೇತೃತ್ವದಲ್ಲಿ ಸಭೆ ಮಾಡಿ ಹಣ ಬಳಕೆಗೆ ಸೂಚಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ಮನರೇಗಾ ವಿಚಾರದಲ್ಲಿ ಕೇಂದ್ರ ಸರ್ಕಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೂ ವಿಬಿ ಗ್ರಾಮ್ ಜಿ ಯೋಜನೆಯಲ್ಲಿ 40% ಅನುದಾನವನ್ನು ರಾಜ್ಯ ಸರ್ಕಾರ ಹಾಕಬೇಕಿದೆ. ಕೇಂದ್ರ ಸರ್ಕಾರ ಯಾವೆಲ್ಲ ಯೋಜನೆ ಕೈಗೊಳ್ಳಬಹುದು ಎಂದು ತಿಳಿಸಿದ್ದು, ಆದಷ್ಟು ಸಮುದಾಯ, ಮೂಲ ಸೌಕರ್ಯ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು" ಎಂದರು.