ಜನರು ಗುಳೆ ಹೋಗುವುದನ್ನು ತಪ್ಪಿಸಲು ಸ್ಥಳೀಯ ಮಟ್ಟದಲ್ಲೆ ಉದ್ಯೋಗ ಸೃಷ್ಟಿಸಲು ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ
ʼಬರ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆʼ
ಬೆಂಗಳೂರು: ‘ಉದ್ಯೋಗವನ್ನು ಅರಸಿಕೊಂಡು ಜನರು ಗುಳೆ ಹೋಗುವುದನ್ನು ತಪ್ಪಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ‘ವಿಬಿ ಜಿ-ರಾಮ್ ಜಿ’ ಯೋಜನೆ ಬಗ್ಗೆ ಅರಿವು ಮೂಡಿಸಬೇಕು. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಜನೆಗೆ ಆದ್ಯತೆ ನೀಡಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರವಿವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಅಗತ್ಯ ಮೇವು, ಉದ್ಯೋಗ ಸೃಜನೆ ಸೇರಿದಂತೆ ಪರಿಹಾರ ಕ್ರಮಗಳ ಕುರಿತು ವಿಡಿಯೋ ಸಂವಾದ ನಡೆಸಿದರು.
‘ವಿಬಿ ಜಿ-ರಾಮ್ ಜಿ ಯೋಜನೆಯನ್ನು ರಾಜ್ಯದಲ್ಲಿ ಯಥಾಪ್ರಕಾರ ಅನುಷ್ಠಾನಗೊಳಿಸಲಾಗುತ್ತಿದೆ. ಜನರು ಕೂಲಿ ಹುಡುಕಿಕೊಂಡು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಯೋಜನೆಯಡಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೂಲಿ ಕೆಲಸಕ್ಕೆ ಹೊರತಾಗಿ, ಜೀವನೋಪಾಯ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಡಿ.ಕೆ.ಶಿವಕುಮಾರ್ ಸೂಚಿಸಿದರು.
‘ಗುತ್ತಿಗೆದಾರರಿಗೆ ಅನುಕೂಲವಾಗುವಂತಹ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬಾರದು. ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ವಿಬಿ ಜಿ-ರಾಮ್ ಜಿ ಯೋಜನೆಯನ್ನು ಬಳಸಿಕೊಳ್ಳಬೇಕು. ಪಂಚಾಯತ್ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
‘ಯೋಜನೆಯ ಪ್ರತಿಯೊಂದು ಸ್ಥಳದಲ್ಲಿ ಕಾಮಗಾರಿ ವಿವರಗಳ ಫಲಕವನ್ನು ಅಳವಡಿಸಬೇಕು. ಹಳೆ ಕಾಮಗಾರಿಗೆ ಹೊಸ ಬಿಲ್ ಮಾಡುವ ಪರಿಪಾಟವನ್ನು ಬಿಡಬೇಕು. ಬರಗಾಲದ ಸ್ಥಿತಿಯಲ್ಲಿ ಜನರ ಅನುಕೂಲಕ್ಕೆ ಏನೇನು ಮಾಡಬೇಕು ಎನ್ನುವುದನ್ನು ಸರಕಾರ ತೀರ್ಮಾನಿಸಲಿದ್ದು, ಅದನ್ನು ಚಾಚೂ ತಪ್ಪದೆ ಜಾರಿ ಮಾಡಬೇಕು’ ಎಂದು ಡಿ.ಕೆ.ಶಿವಕುಮಾರ್ ನಿರ್ದೇಶನ ನೀಡಿದರು.
‘ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಂ, ಕೊಳವೆ ಬಾವಿಗಳ ಮರುಪೂರ್ಣ, ಕೃಷಿ ಹೊಂಡ, ದನದ ಕೊಟ್ಟಿಗೆ ನಿರ್ಮಾಣ ಸೇರಿದಂತೆ ಎಲ್ಲ ಕಾಮಗಾರಿಗಳ ಫೋಟೋ-ವಿಡಿಯೊಗಳನ್ನು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಬೇಕು. ಯಾವುದೇ ಕಾರಣಕ್ಕೂ ಹಳೆ ಕೆಲಸಕ್ಕೆ ಹೊಸ ಬಿಲ್ ಮಾಡುವ ಕಾರ್ಯಕ್ಕೆ ಯಾರೂ ಮುಂದಾಗಬೇಡಿ. ಹಾಗೇನಾದರೂ ಮಾಡಿದರೆ ಕ್ರಮ ಕೈಗೊಳ್ಳುವುದು ನಿಶ್ಚಿತ’ ಎಂದು ಅವರು ಎಚ್ಚರಿಕೆ ನೀಡಿದರು.
ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ವೈಯುಕ್ತಿಕವಾಗಿ ಅನುಕೂಲ ಆಗಬೇಕು. ಹಾಗೆಯೇ ಸಮುದಾಯಕ್ಕೆ ಸಹಕಾರಿಯಾಗಬೇಕು. ಹೀಗೆ ಎರಡೂ ರೀತಿ ಅನುಕೂಲ ಆಗುವಂತೆ ಕೆಲಸ ಮಾಡಬೇಕು. ಯುಪಿಎ ಸರಕಾರದ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ರಾಜಕೀಯ ಕಾರಣಕ್ಕೆ ಹೆಸರು ಬದಲಾಯಿಸಿದ್ದರೂ, ಕಾರ್ಯಕ್ರಮ ಮಾತ್ರ ಅದೇ ಆಗಿವೆ ಎಂದರು.
ಡಿಸಿಗಳಿಗೆ ಅಧಿಕಾರ: ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಒಟ್ಟು 329ಕೋಟಿ ರೂ.ಗಳಷ್ಟು ಅನುದಾನ ಲಭ್ಯವಿದೆ ಎಂದ ಅವರು, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ ಕಾರ್ಯವನ್ನು ಆರಂಭಿಸಿದ್ದು, ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಯೋಜನೆಗಳ ಅನುಷ್ಠಾನಗೊಳ್ಳಬೇಕು ಎಂದರು.
ದುರಸ್ತಿ ಮಾಡಿಸಿ: ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿ ಇರಿಸಬೇಕು. ಹಾಳಾಗಿರುವ ಘಟಕಗಳನ್ನು ಕೂಡಲೇ ದುರಸ್ತಿ ಮಾಡಿಸಬೇಕು ಎಂದ ಅವರು, ಪ್ರಜಾಸೇವೆ ಇಲಾಖೆ ಕಾರ್ಯವನ್ನು ಎಲ್ಲ್ಲ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಪ್ರತಿ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಎರಡು ದಿನ ಜನರ ಬಳಿ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ, ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.