×
Ad

ಸರಕಾರ ನನ್ನ ಮನವಿ ಸ್ವೀಕರಿಸದಿದ್ದರೆ ಬಸ್ಸಿಗೆ ಬೆಂಕಿ ಹಾಕುತ್ತೇನೆ ಎಂದ ಪುನೀತ್ ಕೆರೆಹಳ್ಳಿಯ ವೀಡಿಯೊ ವೈರಲ್‌

Update: 2023-10-06 10:19 IST

ಬೆಂಗಳೂರು: ಮಂಡ್ಯದ ಇದ್ರೀಶ್‌ ಪಾಷಾ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಗಲಭೆಗೆ ಪ್ರಚೋದನೆ ನೀಡಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ʼʼಸುಳ್ಳು ಕೇಸುಗಳನ್ನು ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆʼʼ ಎಂದು ಆರೋಪಿಸಿ ರಾಜ್ಯ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಪೊಲೀಸರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದ ಪುತ್ತೂರು‌ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರ ನಿಯೋಗದೊಂದಿಗೆ ಮಾತನಾಡುತ್ತಿದ್ದ ಪುನೀತ್‌, ʼʼ ನಾನು ನಿಮಗೆ ನಿಮ್ಮ ತಮ್ಮನಾಗಿ ಬೇಕು ಅಂದ್ರೆ, ಕಾಂಗ್ರೆಸ್‌ ಸರಕಾರದ ಯಾವುದಾದರೂ ಪ್ರತಿನಿಧಿ ನನ್ನನ್ನು ಭೇಟಿಯಾಗಿ, ನನ್ನ ಮನವಿಯನ್ನು ಸೀಕರಿಸಬೇಕು. ಅವರು ಬರದೇ ಇದ್ದರೆ ಬಸ್ಸಿಗೆ ಬೆಂಕಿ ಹಾಕುವ... ಪೊಲೀಸರನ್ನು ಜಾಗ ಬಿಡಲಿಕ್ಕೆ ಹೇಳಿ, ನಾನು ಹೋಗ್ತೇನೆʼʼ ಎಂದು ಹೇಳಿರುವುದು ವೈರಲ್‌ ವೀಡಿಯೊದಲ್ಲಿ ದಾಖಲಾಗಿದೆ. 

ಈ ವೀಡಿಯೊಗೆ ಪ್ರತಿಕ್ರಿಯಿಸಿರುವ ಹಲವರು, ʼʼಪೊಲೀಸರು ಬೇಗ ಪುನೀತ್ ಕೆರೆಹಳ್ಳಿಯನ್ನು ಮತ್ತೆ ಜೈಲಿಗೆ ಹಾಕದೆ ಹೋದರೆ ಯಾವುದಾದರೂ ಬಸ್ ಗೆ ಬೆಂಕಿ ಇಟ್ಟು ಅಮಾಯಕರ ಜೀವ ತಗೆಯುತ್ತಾನೆʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಸಮಾಜ ವಿರೋಧಿ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಪದೇ ಪದೇ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಪುನೀತ್ ಕರೆಹಳ್ಳಿ ವಿರುದ್ಧ ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ, ಬಂಧಿಸಿದ್ದರು. ಇದನ್ನು ವಿರೋಧಿಸಿ ಪುನೀತ್‌ ಕೆರೆಹಳ್ಳಿ ರಾಜ್ಯ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ. 

ಬಿಜೆಪಿ ಬೆಂಬಲಿತ ಗೂಂಡಾಗಳು- ಕಾಂಗ್ರೆಸ್‌ ಆರೋಪ

ʼʼಕಲ್ಲೆಸೆಯುವವರು, ಬಸ್ಸಿಗೆ ಬೆಂಕಿ ಹಾಕುವವರು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವವರು ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿತ ಗೂಂಡಾಗಳೇ ಎನ್ನುವುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. ಬಸ್ಸಿಗೆ ಬೆಂಕಿ ಹಾಕುತ್ತೇನೆ ಎನ್ನುವವನು, ಕೊಲೆ, ಸುಲಿಗೆ ನಡೆಸುವವನು ಗೂಂಡಾ ಅಲ್ಲದೆ ಇನ್ನೇನು, ಆತನ ವಿರುದ್ಧ ಪ್ರಕರಣ ದಾಖಲಿಸದೆ ಮುದ್ದಾಡಬೇಕಿತ್ತೇ? ಇಂತಹ ಕ್ರಿಮಿನಲ್ ಒಬ್ಬನಿಗೆ ಬಿಜೆಪಿ ನಾಯಕರು ಸಾಲುಗಟ್ಟಿ ನಿಂತು ಬೆಂಬಲಿಸುವ ಮೂಲಕ ಸ್ವಸ್ಥ ಸಮಾಜಕ್ಕೆ ಕೊಳ್ಳಿ ಇಡುತ್ತಿದ್ದಾರೆʼʼ ಎಂದು ಪುನೀತ್‌ ಕೆರೆಹಳ್ಳಿ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News