ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಕ್ರಮ : ಡಿಸಿಎಂ ಜಿ.ಪರಮೇಶ್ವರ್
► "ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಹೆಚ್ಚಿಸಲು ಕ್ರಮ" ► ವಿಧಾನಸೌಧದಲ್ಲಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರೊಂದಿಗೆ ಸಭೆ
ಬೆಂಗಳೂರು : ವಿಶ್ವವಿದ್ಯಾಲಯ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿವಿದ ದಲಿತಪರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ, ಸುದೀರ್ಘವಾಗಿ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ನಮ್ಮ ಸರಕಾರ 72 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದರಲ್ಲಿ ಕಾನೂನಾತ್ಮಕವಾಗಿ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾತಿ ಸಿಗುತ್ತದೆ. ಇದಲ್ಲದೆ, ನಿಗದಿ ಮಾಡಿದ ಹುದ್ದೆಗಳನ್ನು ತುಂಬಿಲ್ಲ. ಆ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ವಿಶ್ವವಿದ್ಯಾಲಯ ಮತ್ತು ಪ್ರಮುಖವಾದ ಇಲಾಖೆಗಳಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಈ ಬಗ್ಗೆ ಸಿಎಂ ಅವರೊಂದಿಗೆ ಚರ್ಚಿಸಲಾಗುವುದು ಎಂದು ಡಿಸಿಎಂ ಜಿ.ಪರಮೇಶ್ವರ ಅವರು ಹೇಳಿದರು.
ಪಿಟಿಸಿಎಲ್ ಕಾಯ್ದೆಗೆ ಬಹಳ ವರ್ಷಗಳ ನಂತರ ತಿದ್ದುಪಡಿ ತರಲಾಗಿದೆ. ಪ್ರಾವಿಷನ್ ಡಿ ತೆಗೆಯಬೇಕು ಎಂದು ಒತ್ತಾಯ ಮಾಡಿದ್ದನ್ನು ನಮ್ಮ ಸರಕಾರ ತೆಗೆದಿದೆ. ಆದರೂ ಕೂಡ ಬಹಳಷ್ಟು ಅನುಷ್ಟಾನ ಆಗುವುದರಲ್ಲಿ ವಿಳಂಬ ಆಗುತ್ತಿದೆ ಮತ್ತು ಸರಿಯಾದ ರೀತಿಯಲ್ಲಿ ಅನುಷ್ಟಾನ ಆಗುತ್ತಿಲ್ಲ ಎಂದು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ತೀರ್ಮಾನವನ್ನ ಸರ್ಕಾರದಲ್ಲಿ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನದಲ್ಲಿ ಹೆಚ್ಚಿನಾಂಶ ದಲಿತ ಸಮುದಾಯಕ್ಕೆ ಅನುಕೂಲ ಆಗುತ್ತಿಲ್ಲ ಎಂಬುದು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮಾಹಿತಿ ತರಿಸಿಕೊಂಡು, ಯಾವ ಜಿಲ್ಲೆ, ಯಾವ ತಾಲ್ಲೂಕಿನಲ್ಲಿ ದಲಿತ ಸಮುದಾಯದ ಮಹಿಳೆಯರಿಗೆ ಅನ್ಯಾಯವಾಗಿದೆ. ಅವರಿಗೆ ಈ ಗ್ಯಾರಂಟಿ ಯೋಜನೆಗಳು ತಲುಪುತ್ತಿಲ್ಲ ಎಂಬುದರ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು. ಗ್ಯಾರಂಟಿ ಯೋಜನೆಯಲ್ಲಿ ದಲಿತ ಸಮುದಾಯದ ಹೆಣ್ಣುಮಕ್ಕಳನ್ನು ಕೈಬಿಟ್ಟಿದ್ದರೆ ಸರಿಪಡಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಅಲ್ಲದೆ, ಅದು ಸಾಕಾಗುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ ರೂ. 1800 ಸ್ಕಾಲರ್‌ಶಿಪ್ ಕೊಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ 3000 ಖರ್ಚಾಗುತ್ತಿದೆ. ಹೇಗೆ ನಿಭಾಯಿಸಬೇಕು ಎಂಬ ಪ್ರಶ್ನೆ ಬಂದಿದೆ. ಸರ್ಕಾರ ನೀಡುವ ಸ್ಕಾಲರ್‌ಶಿಪ್ ಸಾಕಾಗುತ್ತಿಲ್ಲ ಎಂಬುದನ್ನು ತಿಳಿಸಿದ್ದಾರೆ. ಈ ಕುರಿತಂತೆ ಸಿಎಂ ಅವರೊಂದಿಗೆ ಚರ್ಚಿಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಸ್ಕಾಲರ್‌ಶಿಪ್ ಹಣವನ್ನು ಯಾವ ರೀತಿ ಹೆಚ್ಚಿಸಬೇಕು ಎಂಬ ತೀರ್ಮಾನವನ್ನು ಮಾಡಲಾಗುವುದು ಎಂದು ತಿಳಿಸಿದರು.
ವಿದೇಶವ್ಯಾಸಂಗ ವಿದ್ಯಾರ್ಥಿ ವೇತನ ಕಡಿಮೆ ಇದೆ. ಆ ದೇಶದ ವಿಶ್ವವಿದ್ಯಾಲಯದಲ್ಲಿ ಪಾವತಿಸಿಕೊಳ್ಳಲಾಗುವ ಶುಲ್ಕವನ್ನು ನೀಡಲು ಕ್ರಮ ವಹಿಸಲಾಗುವುದು. ಉನ್ನತಶ್ರೇಣಿಯಲ್ಲಿ ಉತ್ತೀರ್ಣರಾದವರನ್ನು ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ನೇರ ನೇಮಕಾತಿ ಮಾಡಲಾಗುವುದು. ಆದಿವಾಸಿ ಸಮುದಾಯದ 12 ಜನ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಅವರಿಗೆ ಕೆಲಸ ಸಿಕ್ಕಿಲ್ಲ. ವಿಶೇಷ ನೇಮಕಾತಿ ಮೂಲಕ ಉದ್ಯೋಗ ಕಲ್ಪಿಸಲು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಆರ್ಟ್ ಆಫ್ ಲೀವಿಂಗ್ ಅಧೀನದಲ್ಲಿದೆ ಎನ್ನಲಾದ ಎಸ್‌ಸಿ, ಎಸ್‌ಟಿ ಸಮುದಾಯದ 150 ಎಕರೆ ಭೂಮಿ ಬಗ್ಗೆ ಎಸ್‌ಐಟಿಯವರು ಪರಿಶೀಲಿಸಲಿದ್ದಾರೆ. ತದನಂತರ ಸತ್ಯಾಂಶ ಏನೆಂಬುದು ಗೊತ್ತಾಗಲಿದೆ. ಇದರಲ್ಲಿ ಯಾರು ಸರಿ ಇಲ್ಲ, ಯಾರು ಸರಿ ಇದ್ದಾರೆ ಎಂಬುದು ಹೊರಬರುತ್ತದೆ. ಸಭೆಯಲ್ಲಿ ಪ್ರಸ್ತಾಪ ಆಯಿತು. ಕಾಕತಾಳೀಯ ಎಂಬಂತೆ ಇವತ್ತು ಎಸ್‌ಐಟಿ ರಚಿಸಿರುವ ಬಗ್ಗೆ ಆದೇಶವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಜಾತಿ ಪ್ರಮಾಣಪತ್ರ ನೀಡಲು 21 ದಿನ ಸಮಯ ನೀಡಲಾಗಿದೆ. ಇದು ವಿಳಂಬವಾಗುವುದಿಲ್ಲ. ಜಾತಿ ಪ್ರಮಾಣ ಪತ್ರ ನೀಡಿದರೆ, ಉದ್ಯೋಗ, ಶಿಕ್ಷಣಕ್ಕೆ ಬಳಸಲು ಅನುಕೂಲವಾಗಲಿದೆ. ಬಿಜೆಪಿಯವರು ಸದನ ಒಳಗೆ ಮತ್ತು ಹೊರಗೆ ಅಕ್ರಮ ಬಾಂಗ್ಲಾ ವಲಿಸಗರ ಕುರಿತು ಹತ್ತಾರು ಬಾರಿ ಪ್ರಶ್ನೆ ಎತ್ತಿದ್ದಾರೆ. ಪಿಆರ್‌ಸಿ ನೀಡುವುದರಿಂದ ಅಕ್ರಮ ವಲಸಿಗರನ್ನು ಹೊರ ಹಾಕಲು ಉಪಯೋಗ ಆಗುತ್ತದೆ ಎಂದರು.
ಸಭೆಯಲ್ಲಿ ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಪ್ರೊ. ಇಂದಿರಾ ಕೃಷ್ಣಪ್ಪ, ಎಂ. ವೆಂಕಟಸ್ವಾಮಿ, ಶ್ರೀಧರ್ ಕಲಿವೀರ, ಸುಬ್ಬು ಹೊಲೆಯಾರ್ ಹಾಗೂ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ದದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಆರ್ಥಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.