×
Ad

ಬಟ್ಟೆಯಿಂದ ಪ್ರಜೆಗಳನ್ನು ವಿಭಜಿಸುವವರು ಈ ಬಾಲಕನಿಂದ ಪಾಠ ಕಲಿತಾರೇ?: ಪರೋಕ್ಷವಾಗಿ ಪ್ರಧಾನಿಯನ್ನು ಟೀಕಿಸಿದ ನಟ ಕಿಶೋರ್‌

Update: 2023-09-27 12:33 IST

ನಟ ಕಿಶೋರ್‌ ಕುಮಾರ್‌

ಬೆಂಗಳೂರು: ಬಟ್ಟೆ ನೋಡಿ ಅವರನ್ನು ಗುರುತಿಸಬಹುದು ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಗೆ ಬಹುಭಾಷಾ ನಟ ಕಿಶೋರ್‌ ಕುಮಾರ್‌ ಅವರು ಪರೋಕ್ಷವಾಗಿ ಟೀಕಿಸಿದ್ದಾರೆ.

ರೈಲ್ವೇ ಹಳಿ ಹಾನಿಗೀಡಾಗಿರುವುದನ್ನು ಕಂಡು ತನ್ನ ಬಟ್ಟೆಯನ್ನೇ ಬಿಚ್ಚಿ ರೈಲು ಚಾಲಕನಿಗೆ ಸಿಗ್ನಲ್‌ ಕೊಟ್ಟು ಭಾರೀ ಅವಘಡವನ್ನು ತಪ್ಪಿಸಿದ 12 ರ ಬಾಲಕ ಮುರ್ಸಲಿನ್ ಶೇಖ್ ರ ಬಗ್ಗೆ ʼವಾರ್ತಾ ಭಾರತಿʼ ಮಾಡಿದ್ದ ವರದಿಯನ್ನು ಹಾಗೂ ಉತ್ತರಪ್ರದೇಶದಲ್ಲಿ ಮುಸ್ಲಿಂ ಬಾಲಕನಿಗೆ ಇತರೆ ಸಹಪಾಠಿಗಳಿಂದ ಹೊಡೆಸಿದ ಶಿಕ್ಷಕಿಯ ವೈರಲ್‌ ವಿಡಿಯೋದ ಸುದ್ದಿಯನ್ನು ಹಂಚಿಕೊಂಡಿರುವ ಕಿಶೋರ್‌, ದ್ವೇಷ ರಾಜಕೀಯಗಳ ಬಗ್ಗೆ ತಮ್ಮ ಆಕ್ಷೇಪ ಎತ್ತಿದ್ದಾರೆ.

“ತನ್ನ ಸ್ಥಾನದ ಗೌರವ ಘನತೆಯ ಅರಿವಿಲ್ಲದೆ, ಬಟ್ಟೆಯಿಂದ ಭವ್ಯಭಾರತದ ಪ್ರಜೆಗಳನ್ನು ವಿಭಜಿಸುವ ನಾಚಿಕೆಗೇಡು ಸಣ್ಣತನ ಬಿಟ್ಟು ರೈಲಿನೊಳಗಿರುವವರು ಯಾವ ಬಟ್ಟೆಯವರು ಎಂದು ಯೋಚಿಸದೆ ಜೀವ ಉಳಿಸಿದ ಈ ಬಾಲಕನಿಂದ ಮಾನವೀಯತೆಯ ಒಂದೆರಡು ಪಾಠ ಕಲಿತೀರೇ?” ಎಂದು ಕಿಶೋರ್‌ ಪ್ರಶ್ನಿಸಿದ್ದಾರೆ.

ಅದೇ ವೇಳೆ, ಉತ್ತರಪ್ರದೇಶದ ಮುಝಫ್ಫರ್‌ನಗರದ ಘಟನೆಯ ಬಗ್ಗೆಯೂ ಉಲ್ಲೇಖಿಸಿದ ಕಿಶೋರ್‌, “ಈ ಬಾಲಕನಿಗೆ ಶಾಲೆಯ ಮಕ್ಕಳೆಲ್ಲರ ಕೈಯಲ್ಲಿ ಕಪಾಳಕ್ಕೆ ಹೊಡೆಸುವ, ದನ ತಿಂದರೆಂದು ಇವನ ಕೋಮಿನ ಮನುಷ್ಯರನ್ನೇ ಸಜೀವದಹನ ಮಾಡುವ ಧರ್ಮಾಂಧರಾಗುವುದು ಬಿಟ್ಟು ಮನುಷ್ಯರಾದೀರೇ? ಹಳಿತಪ್ಪಿ ಹೊರಟ ನಮ್ಮ ಜೀವನವನ್ನು ಸರಿದಾರಿಗೆ ತಂದೀರೇ?” ಎಂದು ಪ್ರಶ್ನಿಸಿದ್ದಾರೆ.

ಕಿಶೋರ್‌ ಅವರು ಫೇಸ್‌ಬುಕ್‌ನಲ್ಲಿ ಹಾಕಿರುವ ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.

ರೈಲ್ವೇ ಹಳಿಯ ಮೇಲೆ ನಡೆದು ಹೋಗುತ್ತಿದ್ದ ಬಾಲಕ ಮುರ್ಸಲಿನ್ ಶೇಖ್‌, ಹಾನಿಗೊಳಗಾದ ಹಳಿಯನ್ನು ಗಮನಿಸಿದ್ದಾನೆ. ಅದೇ ಸಮಯದಲ್ಲಿ ಎದುರಿನಿಂದ ರೈಲು ಬರುವುದನ್ನು ಕಂಡ ಬಾಲಕ, ತನ್ನ ಸಮಯ ಪ್ರಜ್ಞೆಯಿಂದ ಸಂಭಾವ್ಯ ರೈಲು ದುರಂತವನ್ನು ತಪ್ಪಿಸಿದ್ದಾನೆ.

ಗಲಭೆಕೋರರನ್ನು ಅವರ ಉಡುಪಿನಿಂದಲೇ ಗುರುತಿಸಬಹುದು ಎಂದು ಈ ಹಿಂದೆ ಪ್ರಧಾನಿ ಮೋದಿ ಸಾರ್ವಜನಿಕ ಸಮಾವೇಶವೊಂದರಲ್ಲಿ ಹೇಳಿದ್ದು ಮುಸ್ಲಿಮರ ಬಗ್ಗೆ ಈ ರೀತಿ ಪರೋಕ್ಷ ಅವಹೇಳನ ಮಾಡಿದ್ದಾರೆ ಎಂದು ಭಾರೀ ಚರ್ಚೆಗೆ ಕಾರಣವಾಗಿತ್ತು.

ರೈಲ್ವೇ ಅಧಿಕಾರಿಗಳು ಸಮಯಪ್ರಜ್ಞೆ ಮೆರೆದ ಬಾಲಕನಿಗೆ ಪ್ರಮಾಣಪತ್ರ ಮತ್ತು ನಗದು ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.

Full View

ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ

ಇಲ್ಲಿ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್‌ಡೇಟ್ ಪಡೆಯಿರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News