×
Ad

ಬಿಕ್ಲು ಶಿವು ಕೊಲೆ ಪ್ರಕರಣ | ಶಾಸಕ ಬೈರತಿ ಬಸವರಾಜ್‌ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

Update: 2025-12-26 19:59 IST

ಬೆಂಗಳೂರು : ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿರುವ ಬಿ.ಎ. ಬಸವರಾಜ ಅಲಿಯಾಸ್ ಬೈರತಿ ಬಸವರಾಜ್, ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಈ ಮಧ್ಯಂತರ ಅರ್ಜಿಯನ್ನು ಶುಕ್ರವಾರ ಪುರಸ್ಕರಿಸಿರುವ ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ರಜಾಕಾಲದ ನ್ಯಾಯಪೀಠ, ತನಿಖಾಧಿಕಾರಿಗಳು ಅರ್ಜಿದಾರರನ್ನು ಬಂಧಿಸಿದರೆ ತಕ್ಷಣವೇ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಆದೇಶಿಸಿತು. ಜತೆಗೆ, ಅರ್ಜಿದಾರರು 5 ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು, ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ತಿರುಚುವುದಾಗಲಿ ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕುವುದಾಗಲಿ ಮಾಡಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಇದೇ ವೇಳೆ, ಮೂಲ ಅರ್ಜಿ ವಿಚಾರಣೆಯನ್ನು 2026ರ ಜನವರಿ 6ಕ್ಕೆ ಮುಂದೂಡಿದ ಹೈಕೋರ್ಟ್, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚಿಸಿತು.

ಅರ್ಜಿದಾರರ ವಾದವೇನು?

ಇದಕ್ಕೂ ಮುನ್ನ ಬೈರತಿ ಬಸವರಾಜ್ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿ, ಪ್ರಕರಣದ ಸಂಬಂಧ ಅರ್ಜಿದಾರರಿಗೆ 5 ತಿಂಗಳು 10 ದಿನ ಹೈಕೋರ್ಟ್‌ನ ಮಧ್ಯಂತರ ರಕ್ಷ ಣೆ ಇತ್ತು. ಅದೇ ರಕ್ಷಣೆ ಮುಂದುವರಿಸಬೇಕು. ಸೂಕ್ತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚಿಸಿತ್ತು. ಅದರಂತೆ, ವಿಚಾರಣಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಅಲ್ಲಿ ಅರ್ಜಿ ವಜಾಗೊಂಡಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಮುಂದುವರಿದು, ರಾಜಕೀಯ ಕಾರಣಕ್ಕೆ ಅರ್ಜಿದಾರರನ್ನು ಪ್ರಕರಣದಲ್ಲಿ ಸಿಲುಕಿಸಲು ಯತ್ನ ನಡೆಸಲಾಗಿದೆ. ಕೊಲೆಯಲ್ಲಿ ಅರ್ಜಿದಾರರ ಯಾವುದೇ ಪಾತ್ರವಿಲ್ಲ. ಪ್ರಕರಣ ಸಿಐಡಿಗೆ ವರ್ಗಾವಣೆಯಾದ ಬಳಿಕ ಬಂಧಿಸಲು ಯತ್ನಿಸಲಾಗುತ್ತಿದೆ ಎಂದು ಬೈರತಿ ಬಸವರಾಜು ಪರವಾಗಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದರು.

ಸರ್ಕಾರದ ಪರ ವಕೀಲ ಕೆ. ನಾಗೇಶ್ ಅವರು, ಪ್ರಕರಣದಲ್ಲಿ ವಾದ ಮಂಡಿಸಲು ಬಿ.ಎನ್‌. ಜಗದೀಶ್‌ ಅವರನ್ನು ವಿಶೇಷ ಅಭಿಯೋಜಕರನ್ನಾಗಿ (ಎಸ್‌ಪಿಪಿ) ನೇಮಕ ಮಾಡಲಾಗಿದೆ. ಅವರಿಗೆ ಜಾಮೀನು ಅರ್ಜಿ ತಲುಪಿಲ್ಲ. ಸದ್ಯ ಎಸ್‌ಪಿಪಿ ಅವರು ವಿದೇಶದಲ್ಲಿದ್ದು, ವಿಚಾರಣೆಗೆ ಹಾಜರಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಡಿಸೆಂಬರ್ 30ರ ಸಂಜೆ ಎಸ್‌ಪಿಪಿ ಹಿಂದಿರುಗಲಿದ್ದಾರೆ. ಆದ್ದರಿಂದ, ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರಲ್ಲದೆ, ಎಸ್‌ಪಿಪಿ ಅಲಭ್ಯತೆಯ ಕುರಿತು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದರು.

ಅಂತಿಮವಾಗಿ ನ್ಯಾಯಪೀಠ, ಸಿಐಡಿ ಪೊಲೀಸರು ಈ ಹಿಂದೆ ನೋಟಿಸ್‌ ನೀಡಿದ್ದಾಗ ಬೈರತಿ ಬಸವರಾಜ್ ಅವರು ತನಿಖೆಗೆ ಹಾಜರಾಗಿದ್ದಾರೆ. ಆದರೆ, ಅವರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಇನ್ನೂ ಆರೋಪಪಟ್ಟಿ ಸಲ್ಲಿಸಿಲ್ಲ. ಆರೋಪಪಟ್ಟಿ ಸಲ್ಲಿಸದಿರುವುದಕ್ಕೆ ತನಿಖಾಧಿಕಾರಿ ಸಮಂಜಸ ಕಾರಣವನ್ನೂ ನೀಡಿಲ್ಲ. 2025ರ ಜುಲೈ 18ರಿಂದ ಡಿಸೆಂಬರ್ 19ರವರೆಗೆ ಹೈಕೋರ್ಟ್ ಅರ್ಜಿದಾರರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ಆದ್ದರಿಂದ, ಸದ್ಯ ಆ ರಕ್ಷಣೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ ನ್ಯಾಯಪೀಠ, ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News