×
Ad

ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ; ನಟ ಪ್ರಕಾಶ್ ರಾಜ್ ತೀವ್ರ ಖಂಡನೆ, ಕ್ರಮಕ್ಕೆ ಆಗ್ರಹ

Update: 2025-08-06 23:11 IST

ಬೆಂಗಳೂರು : ಧರ್ಮಸ್ಥಳದಲ್ಲಿ ನಾಲ್ವರು ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆಯನ್ನು ಬಹಬಾಷಾ ನಟ ಪ್ರಕಾಶ್ ರಾಜ್ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ‌ ಎಕ್ಸ್ ಖಾತೆಯಲ್ಲಿ ವೀಡಿಯೊ ಸಂದೇಶವನ್ನು ಹಂಚಿಕೊಂಡಿರುವ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪ್ರಕಾಶ್ ರಾಜ್ ತಮ್ಮ ಪೋಸ್ಟ್‌ನಲ್ಲಿ, "ಧರ್ಮಸ್ಥಳದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಮಿತ್ರರ ಮೇಲಿನ ಹಲ್ಲೆ ಖಂಡನಾರ್ಹ.. ಇಂತಹ ಗೂಂಡಾಗಳಿಂದಲೇ ಭಕ್ತಾದಿಗಳು ನಂಬುವ ಧರ್ಮಸ್ಥಳಕ್ಕೆ ಕಳಂಕ ಬಂದಿರುವುದು.. ಸೌಜನ್ಯಾಳ ದಾರುಣ ಹತ್ಯೆಗೆ ನ್ಯಾಯ ಕೇಳಿದರೆ ಇವರಿಗೇಕೆ ಕೋಪ.. ದಯವಿಟ್ಟು ಬಂಧಿಸಿ ಸತ್ಯ ಹೊರತನ್ನಿ," ಎಂದು ಬರೆದುಕೊಂಡಿದ್ದಾರೆ.

ಬುಧವಾರ, ಧರ್ಮಸ್ಥಳದಲ್ಲಿ ವರದಿ ಮಾಡುತ್ತಿದ್ದ ಯೂಟ್ಯೂಬರ್‌ಗಳಾದ ಅಜಯ್ ಅಂಚನ್, ಅಭಿಷೇಕ್, ವಿಜಯ್ ಮತ್ತು ಇನ್ನೋರ್ವ ವ್ಯಕ್ತಿಯ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಾಗಿ ತೆರಳಿದ್ದಾಗ ಈ ಗುಂಪು ಹಲ್ಲೆಗೊಳಗಾಗಿದೆ. ದಾಳಿಯ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಯೂಟ್ಯೂಬರ್‌ಗಳನ್ನು ತಕ್ಷಣವೇ ಉಜಿರೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಂಡಿದೆ. ಈ ಘಟನೆಯು ಸ್ಥಳದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿತ್ತು ಮತ್ತು ಪೊಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸಬೇಕಾಯಿತು ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News