×
Ad

ಕೊಬ್ಬರಿಗೆ ಹೆಚ್ಚುವರಿ 250 ರೂ.ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

Update: 2023-12-06 22:55 IST

ಬೆಳಗಾವಿ: ಪ್ರತಿ ಕ್ವಿಂಟಾಲ್ ಕೊಬ್ಬರಿ ಬೆಳೆಗೆ ರಾಜ್ಯ ಸರಕಾರ ಈಗಾಗಲೇ ನೀಡುತ್ತಿರುವ 1,250 ರೂ.ಗಳೊಂದಿಗೆ ಹೆಚ್ಚುವರಿ 250 ರೂ.ಗಳನ್ನು ಸೇರಿಸಿ ಕೊಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಪ್ರಕಟಿಸಿದರು.

ಬುಧವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯರಾದ ಶಿವಲಿಂಗೇಗೌಡ, ಷಡಕ್ಷರಿ, ಜೆಡಿಎಸ್ ಸದಸ್ಯರಾದ ಎಚ್.ಡಿ.ರೇವಣ್ಣ, ಬಾಲಕೃಷ್ಣ ಸೇರಿದಂತೆ ಇನ್ನಿತರು ಪ್ರಸ್ತಾವಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಕೊಬ್ಬರಿ ಖರೀದಿ ಪ್ರಕ್ರಿಯೆಯನ್ನು ಇಡೀ ವರ್ಷ ನಡೆಸುವಂತೆ ಕೋರಿ ಈಗಾಗಲೇ ಕೇಂದ್ರ ಸರಕಾರದ ಜೊತೆ ಪತ್ರ ವ್ಯವಹಾರ ನಡೆಸಲಾಗಿದೆ. ನಾವು ಮೂರು ಬಾರಿ ಪತ್ರ ಬರೆದ ನಂತರ ಅವರು ಕೇವಲ 10 ದಿನ ಅವಧಿ ವಿಸ್ತರಣೆ ಮಾಡಿದರು. ನಮ್ಮಲ್ಲಿ ಲಭ್ಯವಿರುವ ನಾಲ್ಕನೇ ಒಂದು ಭಾಗದಷ್ಟು ಖರೀದಿಯಾಗಿಲ್ಲ ಎಂದು ಹೇಳಿದರು.

ಕೇಂದ್ರ ಸರಕಾರ ಖರೀದಿ ಪ್ರಕ್ರಿಯೆ ಆರಂಭಿಸಿದರೆ ಮಾತ್ರ ರೈತರಿಗೆ ಹೆಚ್ಚಿನ ನೆರವು ಸಿಗಲು ಸಾಧ್ಯ. ರಾಜ್ಯದಲ್ಲಿ ಸುಮಾರು 2 ಲಕ್ಷ ಮೆಟ್ರಿಕ್ ಟನ್ ಗಿಂತಲೂ ಹೆಚ್ಚಿನ ಪ್ರಮಾಣದ ಕೊಬ್ಬರಿ ಲಭ್ಯವಿದೆ. ಕೇಂದ್ರ ಸರಕಾರ ಖರೀದಿಗೆ ಮುಂದಾದರೆ ಸಮಸ್ಯೆ ಬಗೆಹರಿಯುತ್ತದೆ. ಜೊತೆಗೆ, ಈ ವಿಚಾರದಲ್ಲಿ ಕೇಂದ್ರ ಸರಕಾರದ ಬಳಿ ನಿಯೋಗ ತೆಗೆದುಕೊಂಡು ಹೋಗಲು ನಾವು ಸಿದ್ಧವಿದ್ದೇವೆ ಎಂದು ಅವರು ತಿಳಿಸಿದರು.

‘ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಕೊಬ್ಬರಿಗೆ 15 ಸಾವಿರ ರೂ. ಬೆಂಬಲ ಬೆಲೆ ಕೊಡುವುದಾಗಿ ಕೆಪಿಸಿಸಿ ಅಧ್ಯಕ್ಷರು ಘೋಷಿಸಿ, ತಿಪಟೂರಿನಲ್ಲಿ ಷಡಕ್ಷರಿಯನ್ನು ಗೆಲ್ಲಿಸಿಕೊಂಡು ಬಂದರು. ಈಗ ಕೊಬ್ಬರಿ ಬೆಲೆಯು ಪ್ರತಿ ಕ್ವಿಂಟಾಲ್‍ಗೆ 7500 ರೂ.ಗಳಿಗೆ ಕುಸಿದಿದೆ. ರೈತರಿಗೆ ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳುತ್ತಾರಾ? ಅಥವಾ ಇಲ್ಲವಾ? ಎಂಬುದನ್ನು ಸ್ಪಷ್ಟಪಡಿಸಲಿ’

-ಎಚ್.ಡಿ.ರೇವಣ್ಣ, ಜೆಡಿಎಸ್ ಶಾಸಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News