×
Ad

ನದಿಗಳಿಗೆ ಕಲುಷಿತ ನೀರು |11 ನಗರ ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲು : ಸಚಿವ ಈಶ್ವರ್ ಖಂಡ್ರೆ

Update: 2025-12-18 16:32 IST

ಬೆಳಗಾವಿ : ತಾಜ್ಯ ನೀರನ್ನು ಯಾವುದೇ ಸಂಸ್ಕರಣೆ ಮಾಡದೆ ನದಿಗಳಿಗೆ ಹರಿಸುವ 11 ನಗರ ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ದರ್ಶನ್ ಪುಟ್ಟಣ್ಣಯ್ಯ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಅರ್ಕಾವತಿ, ಲಕ್ಷ್ಮಣತೀರ್ಥ, ತುಂಗಭದ್ರಾ, ಕಾವೇರಿ, ಕಬಿನಿ, ಶಿಂಷಾ, ಭೀಮಾ ಮತ್ತು ನೇತ್ರಾವತಿ ಸೇರಿ 12 ನದಿಗಳ ವ್ಯಾಪ್ತಿಯಲ್ಲಿ 30 ಸ್ಥಳೀಯ ಸಂಸ್ಥೆಗಳಿವೆ. ಎಲ್ಲ ಕಡೆ ಅಗತ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಈ ನದಿಗಳ ಭಾಗದಲ್ಲಿ 814 ಮಿಲಿಯನ್ ಲೀಟರ್(ಎಂಎಲ್‍ಡಿ) ಘನತಾಜ್ಯ ನೀರು ಉತ್ಪಾದನೆಯಾಗುತ್ತಿದೆ. ಅದರಲ್ಲಿ 17 ಎಂ ಎಲ್ ಡಿ ನೀರು ಮಾತ್ರ ಸಂಸ್ಕರಣೆಯಾಗುತ್ತಿದೆ. 614 ಎಂಎಲ್‍ಡಿಯಷ್ಟು ನೀರು ಸಂಸ್ಕರಣೆಗೆ ಘಟಕಗಳಿವೆ. ಬಾಕಿ ಇರುವ 203 ಎಂಎಲ್‍ಡಿ ಸಂಸ್ಕರಣೆಗೆ ಘಟಕಗಳಿಲ್ಲ. ನೀರು ಸಂಸ್ಕರಣೆಯ ಮೇಲೆ ಸುಪ್ರಿಂ ಕೋರ್ಟ್‍ನ ಹಸಿರುಪೀಠ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗಾ ಇರಿಸಿದೆ ಎಂದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಬಿಡಬ್ಲ್ಯೂಎಸ್‍ಎಸ್‍ಬಿ) ಕೆಯುಡಬ್ಲ್ಯೂಎಸ್‍ಎಸ್‍ಬಿ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 19 ತ್ಯಾಜ್ಯ ನೀರು ಸಂಸ್ಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ 48 ಎಂಎಲ್‍ಡಿ ನೀರು ಸಂಸ್ಕರಿಸುವ ಸಾಮಥ್ರ್ಯವಿದೆ. ನೀರನ್ನು ಶುದ್ಧವಾಗಿಟ್ಟುಕೊಳ್ಳಲು ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಅವರು ಹೇಳಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ದರ್ಶನ್ ಪುಟ್ಟಣ್ಣಯ್ಯ, ‘ರಾಜ್ಯದ ಕಾವೇರಿ, ತುಂಗಭದ್ರಾ, ಕೃಷ್ಣ, ಆರ್ಕಾವತಿ ಸೇರಿದಂತೆ 12 ನದಿಗಳಿಗೆ ಸಂಸ್ಕರಿಸದ ತ್ಯಾಜ್ಯ ನೀರನ್ನು ಹರಿಸಲಾಗುತ್ತಿದೆ. ಪಾಂಡವಪುರದಲ್ಲಿ ಕಾವೇರಿ ನದಿಗೆ ಮಲಿನ ನೀರು ಸೇರುತ್ತಿದೆ. ಆ ಮಲೀನ ನೀರು ಬೆಂಗಳೂರಿಗೆ ಸರಬರಾಜಾಗುತ್ತಿದೆ. ಸಂಸ್ಕರಿಸಿದ ಬಳಿಕವೇ ನೀರನ್ನು ನದಿಗೆ ಹರಿಸಲು ಕ್ರಮ ಕೈಗೊಳ್ಳಬೇಕು. ಈ ಕೆಲಸಕ್ಕೆ ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News