ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಸಚಿವ ಕೃಷ್ಣಭೈರೇಗೌಡ ವಿರುದ್ಧದ ಭೂ ಕಬಳಿಕೆ ಆರೋಪ
ಆರೋಪದ ಚರ್ಚೆಗೆ ಸಿದ್ಧ: ಕೃಷ್ಣಬೈರೇಗೌಡ ಸವಾಲು
ಆರ್.ಅಶೋಕ್/ಕೃಷ್ಣಭೈರೇಗೌಡ
ಬೆಳಗಾವಿ : ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಕೇಳಿ ಬಂದಿರುವ ಸ್ಮಶಾನ ಮತ್ತು ಕೆರೆ ಭೂಮಿ ಕಬಳಿಕೆ ಆರೋಪ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿತು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ಬಳಿಕ ಶೂನ್ಯವೇಳೆಗೆ ಅವಕಾಶ ಕೋರಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ‘ಸಚಿವರ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸ್ಪಷ್ಟನೆ ನೀಡಬೇಕು ಹಾಗೂ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, ಈ ವಿಷಯ ಬಗ್ಗೆ ಚರ್ಚೆ ನಡೆಸುವುದು ಅಥವಾ ಬಿಡುವುದು ಸ್ಪೀಕರ್ ಪೀಠದ ವಿವೇಚನೆಗೆ ಬಿಟ್ಟಿದ್ದು. ಆದರೆ, ಸುಳ್ಳು ಆರೋಪ ಕುರಿತು ನನಗೆ ವಿಷಯ ಪ್ರಸ್ತಾಪಿಸಲು ಮುಂದಾಗಿರುವ ಪ್ರತಿಪಕ್ಷ ನಾಯಕರು ನೋಟಿಸ್ ನೀಡದಿದ್ದರೂ ಈ ವಿಷಯ ಚರ್ಚೆ ನಡೆಸಲು ನಾನು ಸಿದ್ಧವಾಗಿದ್ದೇನೆ ಎಂದು ಹೇಳಿದರು.
ಬಳಿಕ ಆರ್.ಅಶೋಕ್ ಸೇರಿದಂತೆ ಹಲವು ವಿಪಕ್ಷ ಸದಸ್ಯರು, ‘ಸದನ ನಡೆಯುವ ಸಂದರ್ಭದಲ್ಲಿ ಹೊರಗಡೆ ತಮ್ಮ ಮೇಲಿನ ಆರೋಪಗಳಿಗೆ ಸಚಿವರು ಸ್ಪಷ್ಟನೆ ನೀಡಿರುವುದು ಸರಿಯಲ್ಲ. ಮೊದಲ ಸದನದೊಳಗೆ ಮಾತನಾಡಲಿ’ ಎಂದು ಆಗ್ರಹಿಸಿದರು.
ಆಗ ಮಧ್ಯಪ್ರವೇಶಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ‘ನೀತಿ, ನಿಯಮ ರಚನೆ ವಿಚಾರವಾಗಿ ಮಾತ್ರ ಸದನದ ಹೊರಗಡೆ ಮಾತನಾಡುವಂತೆ ಇಲ್ಲ. ಆದರೆ, ಸುಳ್ಳು ಆರೋಪ ವಿಷಯದಲ್ಲಿ ಕಂದಾಯ ಸಚಿವರು ಹೊರಗಡೆ ಸ್ಪಷ್ಟನೆ ನೀಡಿರುವುದು ಸರಿಯಾಗಿ ಇದೆ’ ಎಂದು ಹೇಳಿದರು.
ಈ ವೇಳೆ ಸ್ಪೀಕರ್ ಯು.ಟಿ.ಖಾದರ್, ‘ಉತ್ತರಿಸಲು ಸಚಿವರು ಸಿದ್ದವಿದ್ದರೂ, ಪ್ರಶ್ನಿಸಲು ವಿಪಕ್ಷ ಸಿದ್ಧವಾಗಿದ್ದರೂ, ನಾನು ಇದಕ್ಕೆ ಅವಕಾಶ ನೀಡಲು ಸಿದ್ಧವಿಲ್ಲ. ಈ ಬಗ್ಗೆ ಪರಿಶೀಲಿಸಿ ಮುಂದೆ ಈ ವಿಷಯ ತೆಗೆದುಕೊಳ್ಳುತ್ತೇನೆ’ ಎಂದು ಚರ್ಚೆಗೆ ತೆರೆ ಎಳೆದರು.