ಹೊಟ್ಟೆ ಮೇಲೆ ಗಾಯ, 200 ಮೀಟರ್ ದೂರದಲ್ಲಿ ಕಾರು ಪತ್ತೆ: ನೈಸ್ ರಸ್ತೆಯಲ್ಲಿ ವಕೀಲನ ಮೃತದೇಹ ಪತ್ತೆ ಪ್ರಕರಣ ಇನ್ನೂ ನಿಗೂಢ
ಎಚ್. ಜಗದೀಶ್
ಬೆಂಗಳೂರು: ಕೆಂಗೇರಿ ಬಳಿಯ ನೈಸ್ ರಸ್ತೆಯಲ್ಲಿ ವಕೀಲರೊರ್ವರ ಮೃತದೇಹ ಪತ್ತೆ ಪ್ರಕರಣ ಇನ್ನೂ ನಿಗೂಢವಾಗಿದೆ. ಕಾರನ್ನು ಅಪಘಾತಗೊಳಿಸಿ ಬಳಿಕ ವಕೀಲನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಶುಕ್ರವಾರ ಕೆಂಗೇರಿಯ ಎಸ್ಎಂವಿ ಲೇಔಟ್ ನಿವಾಸಿ ಎಚ್. ಜಗದೀಶ್ ಮೃತದೇಹ ಪತ್ತೆಯಾಗಿತ್ತು. ಜಗದೀಶ್ ಮಂಡ್ಯದ ಮಳವಳ್ಳಿ ಮೂಲದವರು. ಘಟನೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ಸೋದರಸಂಬಂಧಿ ಡಾ. ಪ್ರಭಂಜನ್ ದೂರು ದಾಖಲಿಸಿದ್ದಾರೆ.
ಕೆಂಗೇರಿಯ ರಾಮನ್ ಎಸ್ಟೇಟ್ ಜಂಕ್ಷನ್ ಬಳಿ ನೈಸ್ ರಸ್ತೆಯಲ್ಲಿ ಮೃತದೇಹವೊಂದು ಬಿದ್ದುಕೊಂಡಿರುವ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮೃತದೇಹಕ್ಕಿಂತ 200 ಮೀಟರ್ ದೂರದಲ್ಲಿ ಅವರ ಕಾರು ಪತ್ತೆಯಾಗಿತ್ತು. ಕಾರಿನ ಎಂಜಿನ್ ಆನ್ ಮಾಡಲಾಗಿತ್ತು. ಬಾಗಿಲುಗಳು ಲಾಕ್ ಆಗಿದ್ದವು. ಕಾರಿನ ಪಾರ್ಕಿಂಗ್ ಲೈಟ್ಗಳನ್ನು ಆನ್ ಮಾಡಲಾಗಿತ್ತು.
ʼಜಗದೀಶ್ ಅವರ ಎಡಗಾಲು ಮತ್ತು ಹೊಟ್ಟೆಯ ಮೇಲೆ ಗಾಯಗಳಾಗಿದ್ದವು. ತಲೆಯ ಹಿಂಭಾಗದಲ್ಲಿ ಮೆದುಳು ಹೊರಗೆ ಚೆಲ್ಲಿತ್ತು. ಅಪಘಾತ ಮಾಡಿದ ಬಳಿಕ ಅವರನ್ನು ವಾಹನದಿಂದ ಹೊರಕ್ಕೆ ಎಳೆದು ಕೊಲೆ ಮಾಡಲಾಗಿದೆ. ಅವರ ಮೊಬೈಲ್ ಕಾಣೆಯಾಗಿದೆʼ ಎಂದು ಡಾ. ಪ್ರಭಂಜನ್ ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ಜಗದೀಶ್ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿರುವ ಕಕ್ಷಿದಾರರನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದರು.
ʼವಾಹನ ಪರಿಶೀಲಿಸಿದಾಗ ಅಪಘಾತ ನಡೆದಿರುವುದು ಕಂಡು ಬಂದಿದೆ. ಆದರೆ ಅವರ ಸಾವಿಗೆ ನೈಜ ಕಾರಣ ಮರಣೋತ್ತರ ಪರೀಕ್ಷೆ ಬಳಿಕವೇ ತಿಳಿದು ಬರಬೇಕಿದೆʼ ಎಂದು ತನಿಖಾಧಿಕಾರಿಯೋರ್ವರು ತಿಳಿಸಿದ್ದಾರೆ.
ಈ ಕುರಿತು ಪಶ್ಚಿಮ ವಿಭಾಗದ ಎಸಿಪಿ ವಿಕಾಶ್ ಕುಮಾರ್ ವಿಕಾಶ್ ಪ್ರತಿಕ್ರಿಯಿಸಿ, ʼಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಸದ್ಯ ನಾವು ಘಟನೆಯ ಸ್ವರೂಪದ ಬಗ್ಗೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿಲ್ಲ. ನಾವು ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿಯನ್ನು ತನಿಖೆಯ ಬಳಿಕ ಬಹಿರಂಗೊಳಿಸಲಾಗುವುದುʼ ಎಂದು ಹೇಳಿದರು