ಬೆಂಗಳೂರು: ʼರಾಜ್ಯದಲ್ಲಿ ಫಾರಂ 7 ಮೂಲಕ ಅರ್ಹ ಮತದಾರರ ಹೆಸರು ಅಳಿಸಿ ಹಾಕುವ ಷಡ್ಯಂತ್ರ ಪ್ರಕರಣದಲ್ಲಿ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶ ನೀಡಬೇಕುʼ ಎಂದು ಅಹೋರಾತ್ರಿ ಧರಣಿಗೆ ಸಿಎಂ ಡಿ ಕೆ ಶಿವಕುಮಾರ್ ಕರೆ ನೀಡಿರುವುದಲ್ಲದೆ, ಗುರುವಾರದ ಸರಕಾರಿ ಕಾರ್ಯಕ್ರಮ ರದ್ದುಗೊಳಿಸಲು ಸೂಚನೆ ನೀಡಿದ್ದಾರೆ‌‌.

ಬೆಂಗಳೂರಿನ ಗಾಂಧಿನಗರದಲ್ಲಿರುವ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಶಿವಕುಮಾರ್ ಅವರು ಸಂಪುಟ ಸಹೋದ್ಯೋಗಿಗಳೊಂದಿಗೆ ಗುರುವಾರ ಭೇಟಿ ನೀಡಿ ಮನವಿ ನೀಡಿದರು. ನಂತರ ಕಚೇರಿ ಆವರಣದ ಮೆಟ್ಟಿಲುಗಳ ಮೇಲೆ ಧರಣಿ ಮುಂದುವರೆಸಿದ್ದಾರೆ.

ಸಚಿವ ಕೆ ಜೆ ಜಾರ್ಜ್, ಮುನಿಯಪ್ಪ, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಝಮೀರ್ ಅಹ್ಮದ್, ಬಸವಂತಪ್ಪ, ಬೈರತಿ ಸುರೇಶ್, ಶಿವರಾಜ ತಂಗಡಗಿ, ವಿಜಯಾನಂದ ಕಾಶಪ್ಪನವರ್, ಬಾಲಕೃಷ್ಣ, ರಿಜ್ವಾನ್ ಅರ್ಷದ್, ಯತೀಂದ್ರ ಸಿದ್ದರಾಮಯ್ಯ, ಅಜಯ್ ಸಿಂಗ್, ಶಿವಲಿಂಗೇಗೌಡ, ಪುಟ್ಟರಂಗ ಶೆಟ್ಟಿ, ಟಿ ರಘುಮೂರ್ತಿ, ಸಂಸದ ಜಿ ಸಿ ಚಂದ್ರಶೇಖರ್, ಶಾಸಕರಾದ ಕೋನರಡ್ಡಿ, ಕಂಪ್ಲಿ ಗಣೇಶ್, ಭರತ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, "ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿದ್ದು, ನಾವು ಗೌರವಿಸುತ್ತೇವೆ. ರಾಜ್ಯದಲ್ಲಿ ಆಗುತ್ತಿರುವ ಅಕ್ರಮಗಳ ಬಗ್ಗೆ ನಾವು ವಿವರಿಸಿದ್ದೇವೆ. ಅವರು ಕಣ್ಣಾರೆ ಕಂಡಿದ್ದಾರೆ. ಬಿಜೆಪಿ ನಾಯಕರು ತಪ್ಪೋಪ್ಪಿಕೊಂಡಿದ್ದು, ನಾವು ಈ ಕೃತ್ಯದಲ್ಲಿ ಭಾಗಿಯಾಗುದ್ದು ಯಾವುದೇ ಕ್ರಮ ಕೈಗೊಳ್ಳಬೇಡಿ. ನಾವು ಕೊಟ್ಟಿರುವ ಅರ್ಜಿಗಳನ್ನು ವಾಪಸ್ ನೀಡಿ ಎಂದು ತಪ್ಪೋಪ್ಪಿಗೆ ಹೇಳಿಕೆ ನೀಡಿದ್ದಾರೆ" ಎಂದು ವಿವರಿಸಿದರು.

"ಬಳ್ಳಾರಿಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ 13 ಸಾವಿರ ಫಾರಂ 7 ಮೂಲಕ ಅರ್ಜಿಗಳನ್ನು ಸಲ್ಲಿಸಿ, ಹಿಂಪಡೆದಿದ್ದಾರೆ. ಬಿಜಾಪುರದಲ್ಲಿ ಬಬಲೇಶ್ವರ ಹೊರತುಪಡಿಸಿ 13 ಸಾವಿರ ಅರ್ಜಿಗಳನ್ನು ಸಲ್ಲಿಸಿ, ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಅರ್ಜಿಗಳನ್ನು ಹಿಂಪಡೆದಿದ್ದಾರೆ. ಮೈಸೂರು, ಬೆಳಗಾವಿ, ಬಾಲ್ಕಿ ಕ್ಷೇತ್ರಗಳಲ್ಲಿನ ದಾಖಲೆ, ವಿಡಿಯೋಗಳನ್ನು ಕೊಟ್ಟಿದ್ದೇವೆ. ಅವರು ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದರು. ಅವರ ನಡುವಣ ಚರ್ಚೆಯನ್ನು ನಾನು ಬಹಿರಂಗಪಡಿಸುವುದಿಲ್ಲ. ನಾಳೆವರೆಗೂ ಸಮಯ ಕೇಳಿದ್ದಾರೆ" ಎಂದು ತಿಳಿಸಿದರು.

"ಅವರು ಉಪ ಆಯುಕ್ತರ ವರದಿ ಕೇಳಿದ್ದಾರೆ. ನಮ್ಮ ಸಾಕ್ಷಿ ಆಧಾರಗಳ ಮೇಲೆ ನಂಬಿಕೆ ಇಲ್ಲವಾದರೆ ಅವರು ವರದಿ ತರಿಸಿಕೊಳ್ಳಲಿ. ಈ ವಿಚಾರದಲ್ಲಿ ಗಂಭೀರ ತನಿಖೆ ಆದೇಶಿಸುವವರೆಗೆ ನಮ್ಮ ಹೋರಾಟ ನಿಲ್ಲಲ್ಲ. ಈ ಅಕ್ರಮದಲ್ಲಿ ಭಾಗಿಯಾಗಿರುವವರು ಸಾಮಾನ್ಯರಲ್ಲ. ಈ ದೇಶದ ಅತಿ ದೊಡ್ಡ ಕ್ರಿಮಿನಲ್ ಗಳು. ಮತದಾರರ ಮತದಾನದ ಹಕ್ಕು ಕದಿಯಲು ಮುಂದಾಗಿದ್ದಾರೆ. ಆಮೂಲಕ ಮತಗಳ್ಳತನ ಮಾಡಿದ್ದಾರೆ" ಎಂದು ಕಿಡಿಕಾರಿದರು.

"ಈ ಹಿಂದೆ ಚಿಲುಮೆ ಸಂಸ್ಥೆ ಮೂಲಕ ಅಕ್ರಮ ಮಾಡಿದ್ದರು. ಈಗ ಈ ಫಾರಂ 7 ಅರ್ಜಿಗಳನ್ನು ಸಲ್ಲಿಕೆ ಮಾಡಿದವರನ್ನು ಕೇಳಿದರೆ ನಮಗೆ ಗೊತ್ತಿಲ್ಲ, ಬಿಜೆಪಿ ಕಚೇರಿ ಹಾಗೂ ನಾಯಕರಿಂದ ನಮಗೆ ಈ ಅರ್ಜಿಗಳು ಬಂದಿವೆ ಎಂದು ಹೇಳಿದ್ದಾರೆ. ಹೀಗಾಗಿ ನಾವು ಹೆಚ್ಚಿನ ಸಮಯ ನೀಡುವುದಿಲ್ಲ. ಈ ಅಕ್ರಮದ ಹಿಂದೆ ದೊಡ್ಡ ಮಾಫಿಯಾಗಳಿದ್ದು, ಅವರು ಒತ್ತಡ ಹಾಕುತ್ತಾರೆ. ನಮ್ಮ ಮನೆ ಸದಸ್ಯರ ಎಪಿಕ್ ಸಂಖ್ಯೆ ನಮಗೆ ಗೊತ್ತಿರುವುದಿಲ್ಲ. ಆದರೆ ಇವರಿಗೆ ಎಪಿಕ್ ಸಂಖ್ಯೆಯಿಂದ ಎಲ್ಲಾ ಮಾಹಿತಿ ಇದೆ. 224 ಕ್ಷೇತ್ರಗಳಲ್ಲಿ 10-20 ಸಾವಿರ ಮತಗಳನ್ನು ಅಳಿಸುವ ಷಡ್ಯಂತ್ರ ನಡೆದಿದೆ" ಎಂದು ತಿಳಿಸಿದರು.

"ಇಡೀ ದೇಶ ಈ ಮತಗಳ್ಳತನವನ್ನು ನೋಡುತ್ತಿದೆ. ಚುನಾವಣಾ ಆಯೋಗ ಅಗತ್ಯ ಕ್ರಮ ಜರುಗಿಸುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ಉಪ ಆಯುಕ್ತರು ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶ ನೀಡಬೇಕು. ಕೆಲವು ಮತದಾರರು ಎಫ್ ಐಆರ್ ದಾಖಲಿಸಿದ್ದು, ಆ ಪ್ರಕರಣಗಳು ಕಾನೂನು ಪ್ರಕಾರ ತನಿಖೆ ನಡೆಯಲಿವೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor