ಡಾ.ಮೈಸೂರು ನಾಗಮಣಿ ಶ್ರೀನಾಥ್ 

ಬೆಂಗಳೂರು : ಪ್ರತಿವರ್ಷ ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ರಾಜ್ಯ ಸರಕಾರದ ಪ್ರತಿಷ್ಠಿತ ಸಂಗೀತ ವಿದ್ವಾನ್ ಪ್ರಶಸ್ತಿಗೆ ಈ ಬಾರಿ ಪ್ರಸಿದ್ಧ ಗಾಯಕಿ ಡಾ.ಮೈಸೂರು ನಾಗಮಣಿ ಶ್ರೀನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಪಂ. ಫಯಾಝ್ ಖಾನ್ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಆಯ್ಕೆ ಸಮಿತಿ ಇವರನ್ನು ಆಯ್ಕೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ನಾಗಮಣಿ ಶ್ರೀನಾಥ್ ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಹೆಸರು ಮಾಡಿದ್ದಾರೆ. ಮೈಸೂರು ವಿವಿ ಸಂಗೀತ ವಿಭಾಗದ ಮುಖ್ಯರಸ್ಥರಾಗಿ ಹಾಗೂ ಪ್ರೊ ಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸ್ವತಃ ನೂರಕ್ಕೂ ಹೆಚ್ಚು ಶಾಸ್ತ್ರೀಯ ಕೃತಿಗಳನ್ನು ಮತ್ತು ವರ್ಣಗಳನ್ನು ರಚಿಸಿರುವ ಇವರು ‘ಸುನಾದ ಕಲ್ಚರಲ್ ಸೆಂಟರ್’ ಸಂಗೀತ ಶಾಲೆಯ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor