ಔಷಧಗಳ ವಾಸ್ತವ ದರ, MRP ನಡುವೆ ವ್ಯತ್ಯಾಸ | ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಬೆಲೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು : ಯು.ಟಿ.ಖಾದರ್ ಆಗ್ರಹ
ಬೆಂಗಳೂರು : ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಸೇರಿದಂತೆ ದುಬಾರಿ ಔಷಧ, ವೈದ್ಯಕೀಯ ಸಾಧನ ಹಾಗೂ ಬಳಕೆ ಸಾಮಗ್ರಿಗಳ ವಾಸ್ತವ ದರ ಮತ್ತು ರೋಗಿಗಳಿಗೆ ವಿಧಿಸಲಾಗುವ ಎಂಆರ್ ಪಿ ನಡುವೆ ಭಾರಿ ವ್ಯತ್ಯಾಸ ಕಂಡುಬಂದಿದೆ. ಈ ಕುರಿತು ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಬೆಲೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಗುರುವಾರ ನಗರದ ಆರೋಗ್ಯಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಔಷಧಿ ಯಾವ ದರದಲ್ಲಿ ಮಾರಾಟವಾಗುತ್ತಿದೆ ಎಂಬುದರ ಕುರಿತು ರಾಜ್ಯದಲ್ಲಿ ನಡೆಸಿದ ಪರಿಶೀಲನೆಯ ಮಾಹಿತಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಔಷಧಿಗಳ ಬೆಲೆ ನಿಗದಿ ಹಾಗೂ ಅಗತ್ಯ ವಸ್ತುಗಳ ವ್ಯಾಪಾರ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮುಖ ಅಧಿಕಾರ ಕೇಂದ್ರ ಸರಕಾರಕ್ಕಿರುವುದರಿಂದ, ಈ ಕುರಿತು ಕೇಂದ್ರ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸೆ.25 ಮತ್ತು 26ರಂದು ರಾಜ್ಯದ ವಿವಿಧೆಡೆ ನಡೆದ ವಿಶೇಷ ಪರಿಶೀಲನೆಯಲ್ಲಿ 768 ಆಸ್ಪತ್ರೆ ಬಳಕೆ ಸಾಮಗ್ರಿಗಳು ಹಾಗೂ 189 ದುಬಾರಿ ಔಷಧಗಳನ್ನು ಪರಿಶೀಲಿಸಲಾಗಿದೆ. ಮುಂದಿನ ಹಂತದಲ್ಲಿ ಆ್ಯಂಟಿ-ರೆಟ್ರೋವೈರಲ್ ಔಷಧ, ಅತ್ಯಾಧುನಿಕ ಆ್ಯಂಟಿಬಯಾಟಿಕ್, ವೈದ್ಯಕೀಯ ಸಾಧನಗಳು ಮತ್ತು ದುಬಾರಿ ಆಸ್ಪತ್ರೆ ಬಳಕೆ ಸಾಮಗ್ರಿಗಳ ಮೇಲೆ ಪರಿಶೀಲನೆ ಮುಂದುವರಿಸಲಾಗುವುದು ಎಂದು ಖಾದರ್ ತಿಳಿಸಿದರು.
ಇಲಾಖೆಯ ಪರಿಶೀಲನೆಯಲ್ಲಿ ಕೆಲವು ಔಷಧಗಳು ವಾಸ್ತವ ಖರೀದಿ ದರಕ್ಕಿಂತ 10 ರಿಂದ 52 ಪಟ್ಟು ಹೆಚ್ಚಿನ ದರದಲ್ಲಿ ರೋಗಿಗಳಿಗೆ ಬಿಲ್ ಮಾಡುತ್ತಿರುವುದು ಕಂಡುಬಂದಿದೆ. ಉದಾಹರಣೆಗೆ, 86ಕ್ಕೆ ಲ್ಯಾಂಡಿಂಗ್ ಆಗುವ ಗುಫಿಪೊಲ್ ಔಷಧದ ಎಂಆರ್‍ಪಿ 4,528 ರೂ. ಇದ್ದು, ಇದು 52.6 ಪಟ್ಟು ವ್ಯತ್ಯಾಸವಾಗಿದೆ. ಗುಫಿಸೈಕ್ಲೈನ್-50 ಇಂಜೆಕ್ಷನ್ 160 ರೂ. ರಿಂದ 7,110 ರೂ.ಕ್ಕೆ ಹಾಗೂ ಟೆರ್ಲಿಟ್ಸ್ 118 ರೂ. ರಿಂದ 4,416 ರೂ.ಕ್ಕೆ ಮಾರಾಟವಾಗುತ್ತಿರುವುದನ್ನು ಇಲಾಖೆ ದಾಖಲಿಸಿದೆ ಎಂದು ಅವರು ಮಾಹಿತಿ ನೀಡಿದರು.
ಔಷಧಿಗಳ ದರವನ್ನು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಔಷಧಿಗಳ ಬೆಲೆ ಮತ್ತು ಮಾರ್ಜಿನ್ ಕುರಿತು ಪಾರದರ್ಶಕತೆ ತರಲು ಕೇಂದ್ರ ಸರಕಾರ ಸಮಿತಿ ರಚಿಸಿ, ರಾಷ್ಟ್ರೀಯ ಮಟ್ಟದಲ್ಲಿ ದತ್ತಾಂಶ ಅಧ್ಯಯನ ನಡೆಸಬೇಕು. ಜೊತೆಗೆ ಆಡಿಟ್ ಮತ್ತು ಜಾರಿ ವ್ಯವಸ್ಥೆಯನ್ನು ಬಲಪಡಿಸಬೇಕು. ಶೆಡ್ಯೂಲ್ಡ್ ಡ್ರಗ್ಸ್ ಗೆ ಶೇ.16ರಷ್ಟು ಮಾರ್ಜಿನ್ ನಿಗದಿ ಸೇರಿದಂತೆ, ನಾನ್-ಶೆಡ್ಯೂಲ್ಡ್ ಡ್ರಗ್ಸ್ ಗಳ ರಿಟೈಲರ್ ಮಾರ್ಜಿನ್ ಹಾಗೂ ಎಂಆರ್‍ಪಿ ಮುದ್ರಣದ ಕುರಿತು ಸೂಕ್ತ ನಿಯಮ ರೂಪಿಸುವ ಅಗತ್ಯವಿದೆ. 189 ದುಬಾರಿ ಔಷಧಿಗಳ ಕುರಿತ ಮಾಹಿತಿಯನ್ನೂ ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಡಿಸೆಂಬರ್‍ನಲ್ಲಿ ರಾಷ್ಟ್ರೀಯ ಎಫ್‍ಡಿಎ ಆಯುಕ್ತರ ಸಭೆ ನಡೆಯಲಿದ್ದು, ಈ ವಿಷಯಗಳನ್ನು ಅಲ್ಲಿ ಮತ್ತಷ್ಟು ಚರ್ಚಿಸಲಾಗುವುದು. ಔಷಧಿಗಳ ಅಕ್ರಮ ಮಾರಾಟ ತಡೆಗೆ ರಾಜ್ಯ ಸರಕಾರದ ಪ್ರಯತ್ನ ದೇಶದಲ್ಲೇ ಗಮನಾರ್ಹವಾಗಿದೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ತಪಾಸಣೆ ನಡೆಸಲಾಗಿದೆ. ಔಷಧಿಗಳ ಅಕ್ರಮ, ನಿಯಮ ಉಲ್ಲಂಘನೆ ಕುರಿತು ಸಂಘ-ಸಂಸ್ಥೆಗಳಿಗೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳನ್ನೂ ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ಹೇಳಿದರು.