×
Ad

ಪ್ರಜಾಪ್ರಭುತ್ವದಲ್ಲಿ ಮೈತ್ರಿ, ಹೊಂದಾಣಿಕೆ ಸಾಮಾನ್ಯ: ಜೆಡಿಎಸ್‌

Update: 2023-09-22 11:57 IST

ಬೆಂಗಳೂರು: ʼʼಪ್ರಜಾಪ್ರಭುತ್ವದಲ್ಲಿ ಮೈತ್ರಿ, ಹೊಂದಾಣಿಕೆ ಸಾಮಾನ್ಯ. ಆಯಾ ಸಂದರ್ಭಕ್ಕೆ ತಕ್ಕಂತೆ ಮೈತ್ರಿ ಆಗುತ್ತದೆʼʼ ಎಂದು ಜೆಡಿಎಸ್‌ ಹೇಳಿದೆ. 

ಶುಕ್ರವಾರ ಎಕ್ಸ್‌ ನಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್‌ (@JanataDal_S) ʼʼಮೈತ್ರಿ, ಹೊಂದಾಣಿಕೆ ದೇಶ ವಿದೇಶದಲ್ಲೂ ಇದ್ದದ್ದೇ. ಆದರೆ, ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಮೂದಲಿಸುವ ಕಾಂಗ್ರೆಸ್ಸಿಗೆ, ಸ್ವತಃ ತಾನೇ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ ಎನ್ನುವುದು ಮರೆತಿದೆ. ದುರದೃಷ್ಟಕ್ಕೆ ಇಂಥ ಜಾಣರೋಗಕ್ಕೆ ಮದ್ದಿಲ್ಲʼʼ ಎಂದು ಕಿಡಿಕಾರಿದೆ. 

ʼʼಜೆಡಿಎಸ್‌ ಬಿಜೆಪಿ ಬಾಗಿಲಿಗೆ ಪದೇಪದೆ ಹೋಗುತ್ತದೆಂದು ಹಲ್ಲು ಗಿಂಜುವ ಕಾಂಗ್ರೆಸ್ಸಿಗರಿಗೆ; ಅದೇ ಬಿಜೆಪಿ ಜತೆ ಅಧಿಕಾರ ಅನುಭವಿಸಿದ ನಿತೀಶ್‌ ಕುಮಾರ್‌, ಮಮತಾ ಬ್ಯಾನರ್ಜಿ, ಸ್ಟಾಲಿನ್, ಉದ್ಧವಠಾಕ್ರೆ ಮನೆಗಳ ಸುತ್ತ ಗಿರಕಿ ಹೊಡೆಯಲು ಸಂಕೋಚವಿಲ್ಲ! ಗಂಗೆಯಲ್ಲಿ ಮಿಂದರೆ ಕಾಗೆ ಕೋಗಿಲೆ ಆಗುತ್ತದೆಯೇ ಕಾಮಾಲೆ ಕಣ್ಣಿನ ಕಾಂಗ್ರೆಸ್ಸಿಗರೇ?ʼʼ ಎಂದು ಟೀಕಿಸಿದೆ. 

ʼʼಕೆಟ್ಟ ದಾರಿಯಲ್ಲಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಚಾಳಿ. ಶೆಟ್ಟರ್, ಸವದಿಯಂಥ ಬಿಜೆಪಿಗರನ್ನು ಬಲೆಬೀಸಿ ಬಿಗಿದಪ್ಪಿಕೊಂಡ ಹಸ್ತ ಪಕ್ಷಕ್ಕೆ, ಮೈಯ್ಯೆಲ್ಲಾ ಉರಿ ಹತ್ತಿಕೊಂಡಿದೆ. ಸ್ವಇಚ್ಛೆಯಿಂದಲೇ ಉರಿ ಇಟ್ಟುಕೊಂಡರೆ ಹೊಣೆ ಯಾರು? ಬಹುಶಃ, ಅಂಗೈಲಿ ಕೇಶವೇಕೆ ಬೆಳೆಯುತ್ತಿಲ್ಲವೆಂದು ಕೈಕೈ ಉಜ್ಜಿಕೊಳ್ಳುತ್ತಿದೆಯಾ ಕಾಂಗ್ರೆಸ್?ʼʼ ಎಂದು ಜೆಡಿಎಸ್‌ ಕುಟುಕಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News