ʼಜೆಡಿಎಸ್ ಮೈತ್ರಿ ವಿಚಾರದಲ್ಲಿ ಗೊಂದಲ ಬೇಡʼ : ರಾಜ್ಯ ಬಿಜೆಪಿ ಮುಖಂಡರಿಗೆ ಅಮಿತ್ ಶಾ ನಿರ್ದೇಶನ
PC : x/@BJP4Karnataka
ಬೆಂಗಳೂರು : ‘ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಬಿಜೆಪಿ ಒಗ್ಗಟ್ಟಿನಿಂದ ಹೋಗಬೇಕಿದೆ. ಹೀಗಾಗಿ ಆ ಪಕ್ಷದೊಂದಿಗೆ ಯಾವುದೇ ಕಾರಣಕ್ಕೂ ಮೈತ್ರಿ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ನೀಡಬೇಡಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖಂಡರಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.
ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಇನ್ನಿತರ ನಾಯಕರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಈ ವೇಳೆ ಜೆಡಿಎಸ್ ಜತೆಗಿನ ಮೈತ್ರಿಯ ಬಗ್ಗೆ ಕೆಲ ನಾಯಕರು ಅಪಸ್ವರ ಎತ್ತುತ್ತಿರುವ ಬಗ್ಗೆ ಅಮಿತ್ ಶಾ, ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಗೊತ್ತಾಗಿದೆ.
‘ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಜತೆಗೂಡಿ ಹೋಗುವ ಬದಲು ಬಿಜೆಪಿ ಏಕಾಂಗಿಯಾಗಿ ಚುನಾವಣೆಗೆ ಹೋದರೆ ಸ್ವಯಂ ಬಲದ ಮೇಲೆ ಅಧಿಕಾರ ಹಿಡಿಯಬಹುದು’ ಎಂಬ ಮಾತುಗಳು ಕೆಲ ನಾಯಕರಿಂದ ಕೇಳಿ ಬರುತ್ತಿವೆ. ಆದರೆ, ಇಂತಹ ಮಾತುಗಳಿಗೆ ಯಾವುದೇ ಅರ್ಥವಿಲ್ಲ ಎಂದು ಅಮಿತ್ ಶಾ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
‘ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮತಬ್ಯಾಂಕನ್ನು ಎದುರಿಸಲು ಬಿಜೆಪಿ-ಜೆಡಿಎಸ್ ಒಗ್ಗೂಡಿ ಮುನ್ನಡೆಯುವುದು ಅನಿವಾರ್ಯ. ಲೋಕಸಭಾ ಚುನಾವಣೆಯಲ್ಲಿ ಇದು ಸಾಬೀತಾಗಿದ್ದು, ಬಿಜೆಪಿ ಒಬ್ಬಂಟಿಯಾಗಿ ಚುನಾವಣೆ ಎದುರಿಸಬೇಕೆಂಬ ನಿಲುವು ಸರಿಯಲ್ಲ’ ಎಂದು ಅಮಿತ್ ಶಾ, ಬಿಜೆಪಿ ಮುಖಂಡರಿಗೆ ಸಲಹೆ ನೀಡಿದ್ದಾರೆ.
ಕರ್ನಾಟಕ ರಾಜ್ಯದ ಜಾತಿ ಸ್ವರೂಪವನ್ನು ಗಮನಿಸಿದರೆ ನಮಗೆ ಜೆಡಿಎಸ್ ಜತೆಗಿನ ಹೊಂದಾಣಿಕೆ ಅನಿವಾರ್ಯ. ರಾಜ್ಯ ಸರಕಾರದ ವಿರುದ್ಧ ಹೋರಾಟಗಳನ್ನು ರೂಪಿಸುವ ವೇಳೆ ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು. ಇದರಿಂದ ನಮ್ಮ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದು ಅಮಿತ್ ಶಾ, ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.