×
Ad

ಆನೇಕಲ್: ನೀರಿನ ಸಂಪ್ ಸ್ವಚ್ಛಗೊಳಿಸಲು ಇಳಿದ ಕಾರ್ಮಿಕ ಸಹೋದರರಿಬ್ಬರು ಮೃತ್ಯು

Update: 2023-11-23 09:35 IST

ಆನೇಕಲ್, ನ.23: ನೀರಿನ ಸಂಪ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಇಬ್ಬರು ಕಾರ್ಮಿಕ ಸಹೋದರರು ಉಸಿರುಗಟ್ಟಿ ಮೃತಪಟ್ಟ ಘಟನೆ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಪಾಳ್ಯದಲ್ಲಿ ಬುಧವಾರ ಸಂಜೆ ನಡೆದಿದೆ. ಈ ವೇಳೆ ರಕ್ಷಣೆಗೆ ಮುಂದಾದ ಇನ್ನಿಬ್ಬರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರ ಮೂಲದ ಚಂದನ್ ರಾಜವಂಶಿ(31) ಮತ್ತು ಪಿಂಟು ರಾಜವಂಶಿ(21) ಮೃತಪಟ್ಟ ಸಹೋದರರು.

ತಿರುಪಾಳ್ಯ ಗ್ರಾಮದ ವ್ಯೆಟ್ ಅಕಾಡಮಿ ಶಾಲೆ ಬಳಿಯ ಶ್ರೀನಿವಾಸರೆಡ್ಡಿ ಎಂಬವರ ಮಾಲಕತ್ವದ ಸನ್ ಶೈನ್ ಹೋಲ್ಡಿಂಗ್ ಕಂಪೆನಿಯಲ್ಲಿ ಈ ದುರಂತ ಸಂಭವಿಸಿದೆ. ನೀರಿನ ಸಂಪ್ ಸ್ವಚ್ಛಗೊಳಿಸಲು ಈ ಸಹೋದರರನ್ನು ಸಂಪ್ ಗೆ ಇಳಿಸಲಾಗಿತ್ತು. ಈ ವೇಳೆ ಅವರಿಬ್ಬರು ಅಸ್ವಸ್ಥಗೊಂಡರೆನ್ನಲಾಗಿದೆ. ಇದನ್ನು ಕಂಡ ಕಂಪೆನಿಯ ಮಾಲಕ ಶ್ರೀನಿವಾಸರೆಡ್ಡಿ ಮತ್ತು ಇನ್ನೋರ್ವ ಕಾರ್ಮಿಕ  ಜಗದೀಶ್ ಎಂಬವರು ಕೂಡಾ ಸಂಪ್ ಗೆ ಇಳಿದಿದ್ದು, ಅವರು ಕೂಡಾ  ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಉಳಿದ ಕಾರ್ಮಿಕರು ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಂದನ್ ರಾಜವಂಶಿ ಮತ್ತು ಪಿಂಟು ರಾಜವಂಶಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News