×
Ad

ಲೋಕೋಪಯೋಗಿ ಇಲಾಖೆ : ಮಲೆನಾಡು-ಕರಾವಳಿ ಪ್ರದೇಶಗಳಲ್ಲಿ 300 ಕಾಲುಸಂಕಗಳ ನಿರ್ಮಾಣ ಘೋಷಣೆ

Update: 2026-03-06 19:27 IST

ಸಾಂದರ್ಭಿಕ ಚಿತ್ರ | PC : Gemini AI

ಬೆಂಗಳೂರು : ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸಂಪರ್ಕ ರಹಿತ ಜನವಸತಿ ಪ್ರದೇಶಗಳಿಗೆ ಸಾರ್ವಜನಿಕರ ಮತ್ತು ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗಾಗಿ 300 ಕಾಲು ಸಂಕಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದ ಅವರು, ರಾಜ್ಯದ 2025-26ನೇ ಸಾಲಿನ ಬಜೆಟ್‍ನಲ್ಲಿ 216 ಸೇತುವೆಗಳ ನಿರ್ಮಾಣ, 288 ಸೇತುವೆ ದುರಸ್ತಿ ಹಾಗೂ 386 ಕಾಲುಸಂಕಗಳ ನಿರ್ಮಾಣ ಕಾಮಗಾರಿಗಳನ್ನು 2 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದಿಸಲಾಗಿದೆ. ಈ ಕಾರ್ಯಕ್ರಮವನ್ನು ಮುಂದುವರೆಸಿ ಸೇತುವೆಗಳ ನಿರ್ಮಾಣಕ್ಕಾಗಿ ಮುಂದಿನ ಎರಡು ವರ್ಷಗಳಲ್ಲಿ 2 ಸಾವಿರ ಕೋಟಿ ರೂ. ಮೊತ್ತವನ್ನು ಒದಗಿಸಲಾಗುವುದು ಎಂದರು.

400 ಕೋಟಿ ರೂ. ಅಂದಾಜು ಮೊತ್ತದ 135 ಕಿ.ಮೀ. ಉದ್ದದ ವಾಗ್ದಾರಿ-ರಿಬ್ಬನ್‍ಪಲ್ಲಿ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಕೆಕೆಆರ್‍ಡಿಬಿ ಯಿಂದ ಶೇ.50 ರಷ್ಟು ಅನುದಾನ ಒದಗಿಸಿಕೊಂಡು ಅಭಿವೃದ್ಧಿಪಡಿಸಲಾಗುವುದು. ಇಲಾಖೆಯ ಅಧೀನದ ಆಸ್ತಿ ದಾಖಲೆಗಳನ್ನು ಲ್ಯಾಂಡ್ ಪ್ಲಾನ್ ಸರ್ವೇ ಮಾಡಿ ಡಿಜಿಟೈಸೇಷನ್ ಹಾಗೂ ರೆಕಾರ್ಡ್ ರೂಮ್ ನಿರ್ಮಾಣವನ್ನು ಒಟ್ಟಾರೆ ಐದು ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-5 ಘಟ್ಟ-1 ರಡಿ 1,512 ಕಿ.ಮೀ ಉದ್ದದ ರಸ್ತೆಯನ್ನು 4 ಸಾವಿರ ಕೋಟಿ ರೂ. ಮೊತ್ತದಲ್ಲಿ ಈಗಾಗಲೇ ಕೈಗೆತ್ತಿಕೊಂಡಿದ್ದು, ಮುಂದುವರೆದು, ಘಟ್ಟ-2 ರಡಿ 1,846 ಕಿ.ಮೀ ಉದ್ದದ ರಸ್ತೆಯನ್ನು 5 ಸಾವಿರ ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುವುದು. ರಾಯಚೂರು ಜಿಲ್ಲೆಯ ಕಲ್ಮಲಾ-ಸಿಂಧನೂರು ರಸ್ತೆಯ ಒಟ್ಟು 77 ಕಿ.ಮೀ ಉದ್ದದ ಪೈಕಿ 60 ಕಿ.ಮೀ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಈಗಾಗಲೇ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಸಿದ್ದು, ಉಳಿದ 17 ಕಿ.ಮೀ ಉದ್ದದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

2026-27ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಮುಂದುವರೆದ ಯೋಜನೆಗಳಡಿ 2,200 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ಹಾಗೂ 3,500 ಕಿ.ಮೀ ಉದ್ದದ ಜಿಲ್ಲಾ ರಸ್ತೆಗಳನ್ನು 5,776 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕೆಎಸ್‍ಎಚ್‍ಐಪಿ-4 ಅಡಿಯಲ್ಲಿ ಎಡಿಬಿ ನೆರವಿನೊಂದಿಗೆ ಒಟ್ಟು ವೆಚ್ಚ 5,736 ಕೋಟಿ ರೂ. ಯೋಜನಾ ವೆಚ್ಚದಲ್ಲಿ ರಾಜ್ಯದಾದ್ಯಂತ ಸುಮಾರು 875 ಕಿ.ಮೀ ಉದ್ದದ ರಸ್ತೆ ಕಾಮಗಾರಿಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಅನುಮೋದನೆ ಪಡೆದು ಟೆಂಡರ್ ಆಹ್ವಾನಿಸಲು ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ವಿವಿಧ ಇಲಾಖೆಗಳಡಿ ನಿರ್ಮಿಸಲಾಗುವ ಕಟ್ಟಡಗಳ ವಿನ್ಯಾಸ ಮತ್ತು ವೆಚ್ಚದಲ್ಲಿ ಏಕರೂಪತೆಯನ್ನು ತರಲು ಒಂದು ತಜ್ಞರ ಸಮಿತಿ ರಚಿಸಲಾಗುವುದು. ಎಲ್ಲ ಇಲಾಖೆಗಳಡಿಯಲ್ಲಿನ ಕಟ್ಟಡಗಳ ವಿನ್ಯಾಸ ಮತ್ತು ಅಂದಾಜುಗಳನ್ನು ಸದರಿ ಸಮಿತಿಯ ಶಿಫಾರಸ್ಸಿನಂತೆ ಅಂತಿಮಗೊಳಿಸಲಾಗುವುದು. ರಾಜ್ಯಪಾಲರ ಕಚೇರಿಯ ಆವರಣದಲ್ಲಿನ ಆಡಳಿತಾತ್ಮಕ ಬ್ಲಾಕ್, ಒಳಾಂಗಣ ಕ್ರೀಡಾಂಗಣ ಹಾಗೂ ಅಧಿಕಾರಿಗಳ ವಸತಿ ಗೃಹಗಳನ್ನು 27 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News