×
Ad

ಕುಸುಮ್ ಬಿ ಯೋಜನೆಯಡಿ 40 ಸಾವಿರ ಪಂಪ್‍ಸೆಟ್‍ಗಳಿಗೆ ಅನುಮೋದನೆ: ಸಿಎಂ ಸಿದ್ದರಾಮಯ್ಯ

Update: 2025-07-22 18:11 IST

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಕುಸುಮ್ ಬಿ ಯೋಜನೆಯಡಿ ಸೋಲಾರ್ ಕೃಷಿ ಪಂಪ್ ಸೆಟ್ ಅಳವಡಿಸಲು, ಕೇಂದ್ರ ಸರಕಾರ ಶೇ.30, ರಾಜ್ಯ ಸರಕಾರ ಶೇ.50ರಷ್ಟು ಸಬ್ಸಿಡಿ ಒದಗಿಸುತ್ತಿದ್ದು, ಫಲಾನುಭವಿಗಳು ಶೇ.20ರಷ್ಟು ಭರಿಸಬೇಕಿದೆ. ಈ ಯೋಜನೆಯಡಿ 40 ಸಾವಿರ ಪಂಪ್‍ಸೆಟ್‍ಗಳಿಗೆ ಅನುಮೋದನೆ ನೀಡಲಾಗಿದ್ದು, ಇದನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಮಂಗಳವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಕುಸುಮ್ ಬಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 25 ಸಾವಿರ ರೈತರು ಹೆಚ್ಚುವರಿಯಾಗಿ ಕುಸುಮ್ ಬಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯಡಿ ರಾಜ್ಯ ಸರಕಾರ 752 ಕೋಟಿ ರೂ. ವೆಚ್ಚ ಮಾಡಲಿದೆ. ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿದ ಬಳಿಕ ಸಬ್ಸಿಡಿ ಮೊತ್ತ ಕಡಿಮೆಯಾಗಲಿದೆ ಎಂದು ಹೇಳಿದರು.

4.5 ಲಕ್ಷ ಅನಧಿಕೃತ ಐಪಿ ಸೆಟ್‍ಗಳ ಪೈಕಿ 2 ಲಕ್ಷ ಐಪಿ ಸೆಟ್ ಸಂಪರ್ಕ ಅಧಿಕೃತಗೊಳಿಸಲಾಗಿದೆ. ಈ ಅನಧಿಕೃತ ಐಪಿ ಸೆಟ್‍ಗಳನ್ನು ಕುಸುಮ್ ಬಿ ಯೋಜನೆಯಡಿ ಆದ್ಯತೆ ಮೇರೆಗೆ ತರಲು ಕ್ರಮ ವಹಿಸಬೆಕು. ರೈತರಿಗೆ ಸ್ವಯಂ ವಿದ್ಯುತ್ ಮೂಲಸೌಕರ್ಯ ಕಲ್ಪಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಟ್ರಾನ್ಸ್‌ ಫಾರ್ಮರ್‍ಗಳನ್ನು ಇಂಧನ ಇಲಾಖೆ ಒದಗಿಸಲಿದೆ ಎಂದು ಅವರು ತಿಳಿಸಿದರು.

ನೀರಾವರಿ ಪಂಪ್ ಸೆಟ್ ಗಳಿಗೆ 2024-25ರ ಸಾಲಿನಲ್ಲಿ 12,785 ಕೋಟಿ ರೂಪಾಯಿಗಳ ಅನುದಾನ ಹಂಚಿಕೆ ಆಗಿದ್ದು, ಪ್ರಸಕ್ತ ಸಾಲಿನ ಫೆಬ್ರವರಿ ವರೆಗೆ 11,720 ಕೋಟಿ ರೂ. ಬಿಡುಗಡೆ ಆಗಿದೆ. 2025-26ರಲ್ಲಿ 16,021 ಕೋಟಿ ರೂಪಾಯಿಗಳ ಆಯವ್ಯಯ ಹಂಚಿಕೆ ಆಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News