ಸಾಮಾಜಿಕ ಸಮೀಕ್ಷೆಯಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರ ನಿರ್ಧಾರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರು ಭಾಗವಹಿಸದಿರಲು ತೀರ್ಮಾನಿಸಿದ್ದಾರೆ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ತಿಳಿಸಿದೆ.
ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, "ಗ್ಯಾರಂಟಿ ಯೋಜನೆಯ ಸಮೀಕ್ಷೆಗೆ 1ಸಾವಿರ ರೂ.ನೀಡುವುದಾಗಿ ಹೇಳಿ, ಸಮೀಕ್ಷೆ ಬಳಿಕ ಒಂದು ಪೈಸೆಯನ್ನೂ ನೀಡಿಲ್ಲ. ಇತರ ಇಲಾಖೆಗಳಿಂದ ನಡೆಸಿದ ಹಲವಾರು ಸಮೀಕ್ಷೆಗಳಿಗೆ ಸೂಕ್ತ ಸಂಭಾವನೆ ದೊರತಿಲ್ಲ. ಆದುದರಿಂದ ಈ ಸಮೀಕ್ಷೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ" ಎಂದಿದ್ದಾರೆ.
ಆಶಾಗಳು ಪ್ರತಿ ಮನೆಗೆ ನಮೂನೆ ನೀಡುವುದರ ಜೊತೆಗೆ, ಸಮೀಕ್ಷೆಯಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ನೀಡಲು ಕುಟುಂಬದ ಸದಸ್ಯರು ಮುಂಚಿತವಾಗಿ ತಯಾರಿರುವಂತೆ ನೋಡಿಕೊಳ್ಳುವುದು ಸೇರಿದಂತೆ ಇತ್ಯಾದಿ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಲಾಗಿದೆ. ಈ ಎಲ್ಲ ಕೆಲಸಗಳಿಗೆ 2ಸಾವಿರ ರೂ. ನೀಡಲಿದ್ದಾರೆಂಬ ಮಾಹಿತಿ ಇದೆ. ಆದರೆ ಇಲಾಖೆಯಿಂದ ಇದುವರೆಗೂ ಯಾವುದೇ ಆದೇಶ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಎಪ್ರಿಲ್ 1ರಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10ಸಾವಿರ ರೂ.ಗ್ಯಾರಂಟಿ ಗೌರವಧನ ನೀಡಲಾಗುವುದೆಂದು ಭರವಸೆ ನೀಡಿದ ಸರಕಾರ ಇದುವರೆಗೂ ಈಡೇರಿಸಿಲ್ಲ. ಈ ವರ್ಷದ ಬಜೆಟ್‍ನಲ್ಲಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ 1ಸಾವಿರ ರೂ.ಹೆಚ್ಚಳ ಮಾಡಿ, ಆಶಾಗಳಿಗೆ ಹೆಚ್ಚಳ ಮಾಡಲಿಲ್ಲ. ಇದೀಗ ನಡೆಯಲಿರುವ ಸಮೀಕ್ಷೆ ಕೆಲಸಕ್ಕೆ ಆಶಾಗಳಿಗೆ ಎಷ್ಟು ಗೌರವ ಧನ ನೀಡಲಿದೆ ಎಂದು ಸರಕಾರಿ ಆದೇಶವೇ ಇಲ್ಲ ಎಂದು ನಾಗಲಕ್ಷ್ಮೀ ಹೇಳಿದ್ದಾರೆ.
ಸಮೀಕ್ಷೆ ಮಾಡುವಷ್ಟು ದಿನಗಳ ಕಾಲ, ಚಟುವಟಿಕೆ ಆಧಾರಿತ ಪ್ರೋತ್ಸಾಹಧನಕ್ಕೂ ಕುತ್ತು ಬರುತ್ತದೆ. ಮಾತ್ರವಲ್ಲದೆ, ಈ ಗಣತಿಗೆ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಬರಿಗೈಯಲ್ಲಿ ಮನೆಗೆ ಹೋಗುವಂತಹ ಸ್ಥಿತಿ ಬರಲಿದೆ. ಆದುದರಿಂದ ಈ ಎಲ್ಲ ಕಾರಣಗಳಿಂದ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಗೌರವಧನವೂ ಇಲ್ಲದಿರುವುದರಿಂದ ಸಮೀಕ್ಷೆ ಕೆಲಸದಿಂದಲೇ ಹಿಂದೆ ಸರಿಯಲು ಆಶಾ ಕಾರ್ಯಕರ್ತೆಯರು ನಿರ್ಣಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮೀಣ ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆಯ ಕೆಲಸಕ್ಕೆ 5ಸಾವಿರ ರೂ., ನಗರ ಆಶಾ ಕಾರ್ಯಕರ್ತೆಯರಿಗೆ 10ಸಾವಿರ ರೂ.ಗಳಿಗೆ ಕಡಿಮೆ ಇರದಂತೆ ಗೌರವಧನ ನಿಗದಿ ಮಾಡಿ ಆದೇಶ ಮಾಡಬೇಕು. ಇಲ್ಲವೇ, ಸಮೀಕ್ಷೆ ಕೆಲಸಗಳಿಂದ ಕೈಬಿಡಬೇಕು. ಈ ಹಿಂದೆ ಗ್ಯಾರಂಟಿ ಯೋಜನೆಯ ಸಮೀಕ್ಷೆ ಮಾಡಿರುವುದಕ್ಕೆ ಕೊಡಬೇಕಾಗಿದ್ದ 1ಸಾವಿರ ರೂ. ಬಾಕಿ ಗೌರವಧನ ಈ ಕೂಡಲೇ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ಮಾಡಿದ ಆಶಾಗಳಿಗೆ ನಿಗದಿಯಾಗಿದ್ದ ಬಾಕಿ ಸಂಭಾವನೆ ನೀಡಬೇಕು ಎಂದು ನಾಗಲಕ್ಷ್ಮೀ ಒತ್ತಾಯಿಸಿದ್ದಾರೆ.