ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ | ಅನಗತ್ಯ ಊಹಾಪೋಹ ಬೇಡ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ಕುರಿತು ಸುಮ್ಮನೆ ಅನಗತ್ಯ ಊಹಾಪೋಹಗಳು ಆಗಬಾರದು. ವಿಶೇಷ ತಂಡದ ತನಿಖಾ ವರದಿ ಬಂದ ನಂತರ ನಿಜಾಂಶ ಗೊತ್ತಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿ.ಜೆ.ರಾಯ್ ಪ್ರಕರಣದ ಬಗ್ಗೆ ಅನಗತ್ಯ ಊಹಾಪೋಹಗಳು ಸೃಷ್ಠಿಯಾಗಬಾರದು ಎಂಬ ಕಾರಣದಿಂದಲೇ ತಕ್ಷಣ ಎಸ್‍ಐಟಿ ರಚನೆ ಮಾಡಿದ್ದೇವೆ. ಎಸ್‍ಐಟಿ ತಂಡದ ತನಿಖಾ ವರದಿ ಏನು ಬರುತ್ತದೆ, ಯಾರ ಪಾತ್ರಗಳು ಏನಿದೆ ಎಂದು ನೋಡಬೇಕಾಗುತ್ತದೆ ಎಂದರು.
ಎಸ್‍ಐಟಿ ತನಿಖೆ ಚುರುಕು: ರಾಯ್ ಅವರ ಆತ್ಮಹತ್ಯೆಯ ಕುರಿತು ಎಸ್‍ಐಟಿ ತಂಡದ ತನಿಖೆ ಚುರುಕುಗೊಂಡಿದ್ದು, ಫೆ.2ರ ಸೋಮವಾರ ರಾಯ್ ಅವರ ಪತ್ನಿ ಹಾಗೂ ಮಕ್ಕಳ ಹೇಳಿಕೆಗಳನ್ನು ಎಸ್‍ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಜೊತೆಗೆ ರಾಯ್ ಅವರು ತಮ್ಮ ದಿನನಿತ್ಯದ ಆಗುಹೋಗುಗಳ ಬಗ್ಗೆ ಬರೆಯುತ್ತಿದ್ದ ಡೈರಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಯ್ ಅವರ ನಿತ್ಯದ ಭೇಟಿಗಳು, ವ್ಯವಹಾರಿಕ ನಿರ್ಧಾರಗಳ ಕುರಿತು ಡೈರಿಯಲ್ಲಿ ಬರೆದಿರುವುದು ಪತ್ತೆಯಾಗಿದೆ. ಆದರೆ, ಡೈರಿಯಲ್ಲಿರುವ ಅಂಶಗಳನ್ನು ಡೆತ್ ನೋಟ್ ಎನ್ನಲಾಗದು ಎಂಬ ಮಾಹಿತಿಯನ್ನು ಎಸ್‍ಐಟಿ ಮೂಲಗಳು ಸ್ಪಷ್ಟಪಡಿಸಿವೆ.
ರಾಯ್ ಅವರು ತಮ್ಮ ಆತ್ಮಹತ್ಯೆಗೆ ಬಳಸಿರುವ ಪಿಸ್ತೂಲ್ ಅನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದು, ಬೆಲ್ಜಿಯಮ್ ಮೇಡ್ ಸ್ಮಾರ್ಟ್, ಮಿನಿ ಸೌಂಡ್‍ಲೆಸ್ ಪಿಸ್ತೂಲ್ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೇಲ್ನೋಟಕ್ಕೆ ಇದು ಪರವಾನಗಿ ಪಡೆದಿರುವ ಪಿಸ್ತೂಲ್ ಎಂಬುದು ಗೊತ್ತಾಗಿದೆ. ಸದ್ಯ, ಪಿಸ್ತೂಲ್ ಹಾಗೂ ಗುಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಎಸ್‍ಐಟಿ ಮೂಲಗಳು ಮಾಹಿತಿ ನೀಡಿವೆ.