ರೈತರ ಬೆಳೆ ಸಾಲ ಮನ್ನಾ ಮಾಡುವಂತೆ ವಿಪಕ್ಷ ನಾಯಕ ಅಶೋಕ್ ಆಗ್ರಹ
ಬೆಂಗಳೂರು : ರಾಜ್ಯದಲ್ಲಿ ತೀವ್ರ ಬರಗಾಲ ಇರುವುದರಿಂದ ಸರಕಾರ ರೈತರ ಬೆಳೆ ಸಾಲವನ್ನು ಮನ್ನಾ ಮಾಡಬೇಕು. ಜೊತೆಗೆ, ಎರಡು ವರ್ಷ ರೈತರಿಂದ ಸಾಲ ವಸೂಲಿ ಮಾಡುವುದು ನಿಲ್ಲಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ರೈತರ ಸಮಸ್ಯೆ ಮತ್ತು ಸಂಬಂಧಿತ ವಿಷಯಗಳ ಕುರಿತು ನಡೆದ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಖಾಸಗಿ ಲೇವಾದೇವಿಗಾರರು, ಮೈಕ್ರೋ ಫೈನಾನ್ಸ್ ನವರು ರೈತರಿಗೆ ಸಾಲ ನೀಡಿ ಮೀಟರ್ ಬಡ್ಡಿ ವಸೂಲಿ ಮಾಡುವುದಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಮೀಟರ್ ಬಡ್ಡಿ ವಸೂಲಿ ಮಾಡುವವರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸುವುದಾಗಿ ಎಚ್ಚರಿಕೆ ನೀಡಬೇಕು. ಪ್ರತಿ ಎಕರೆ ಬೆಳೆ ನಷ್ಟಕ್ಕೆ 50 ಸಾವಿರ ರೂ.ಪರಿಹಾರವನ್ನು ಸರಕಾರ ನೀಡಬೇಕು. ಶಾಸಕರ ನೇತೃತ್ವದಲ್ಲಿ ಬರ ಪರಿಸ್ಥಿತಿ ಎದುರಿಸಲು, ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ವ್ಯವಸ್ಥೆ ಮಾಡುವ ಕಾರ್ಯಪಡೆಯನ್ನು ತಕ್ಷಣ ರಚಿಸಬೇಕು ಎಂದು ಅಶೋಕ್ ಹೇಳಿದರು.
ಕೊಳವೆ ಬಾವಿ ಕೊರೆಸಲು ಸಾಕಷ್ಟು ನಿರ್ಬಂಧಗಳಿವೆ. ಬರ ಪರಿಸ್ಥಿತಿಯಿರುವುದರಿಂದ ಕೊಳವೆ ಬಾವಿ ಕೊರೆಸಲು ಅವಕಾಶ ಕಲ್ಪಿಸಬೇಕು. ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಲಿದ್ದು, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದೆ. ಆದುದರಿಂದ, ಈ ಬಗ್ಗೆ ಸರಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಅಶೋಕ್ ಸಲಹೆ ನೀಡಿದರು.
ಬಡ ರೈತರು, ಕೃಷಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಶುಲ್ಕವನ್ನು ಸರಕಾರ ಭರಿಸಬೇಕು. ಗುಳೆ ಹೋಗುವುದನ್ನು ತಡೆಯಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವಿಬಿ ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಬರ ಪರಿಸ್ಥಿತಿ ಎದುರಿಸಲು ಹಣಕಾಸಿನ ತೊಂದರೆ ಆಗಬಾರದು. ಸರಕಾರ ದಿವಾಳಿಯಾಗಿದೆ ಎಂದು ಆರ್ಥಿಕ ಇಲಾಖೆಯೆ ಹೇಳಿದೆ. ರೈತರನ್ನು ಈ ಬರಗಾಲ ದಿವಾಳಿಯ ಪರಿಸ್ಥಿತಿಗೆ ತಂದಿದೆ. ಬರ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸರಕಾರ ವಿಫಲವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಲಿ ಎಂದು ಅವರು ಹೇಳಿದರು.
ರಾಜ್ಯ ಸರಕಾರಕ್ಕೆ ಇದು ಪರೀಕ್ಷೆಯ ಕಾಲ, ಸರಿಯಾಗಿ ಕೆಲಸ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ, 2028ರಲ್ಲಿ ಶೂನ್ಯವಾಗುತ್ತೀರಾ ಎಂದು ಎಚ್ಚರಿಸಿದ ಅಶೋಕ್, ಶಾಸಕರ ನೇತೃತ್ವದ ಕಾರ್ಯಪಡೆಗಳಿಗೆ ಪ್ರತಿ ತಾಲೂಕಿಗೆ 50 ಕೋಟಿ ರೂ.ಗಳನ್ನು ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.