ರೇಣುಕಾಸ್ವಾಮಿ ಕೊಲೆ ಪ್ರಕರಣ; ಸೆ.26ರಂದು ಪವಿತ್ರಾ ಗೌಡ ಜಾಮೀನು ಅರ್ಜಿ ಆದೇಶ ಪ್ರಕಟಿಸಲಿರುವ ಕೋರ್ಟ್
ಪವಿತ್ರಾ ಗೌಡ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲನೇ ಆರೋಪಿ ಪವಿತ್ರಾ ಗೌಡ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಸೆಪ್ಟೆಂಬರ್ 26ರಂದು ಪ್ರಕಟಿಸಲಿದೆ.
ಇದೇ ವೇಳೆ, ಪವಿತ್ರಾ ಗೌಡ ಅವರಿಗೆ ಕೈದಿಗಳ ದಟ್ಟಣೆ ಕಡಿಮೆಯಿರುವ ಸೆಲ್ ನೀಡಬೇಕು. ಶೌಚಗೃಹ, ಸ್ನಾನದ ಕೋಣೆ, ಕುಡಿಯುವ ನೀರು ಸೇರಿ ಇನ್ನಿತರ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸೂಚಿಸಿ 2026ರ ಸೆಪ್ಟೆಂಬರ್ 7ರಂದು ನೀಡಿರುವ ನಿರ್ದೇಶನಗಳನ್ನು ಪಾಲಿಸಿರುವ ಬಗ್ಗೆ ಸೆಪ್ಟೆಂಬರ್ 26ರಂದೇ ವರದಿ ಸಲ್ಲಿಸುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರು ಈ ನಿರ್ದೇಶನ ನೀಡಿದ್ದಾರೆ. ಇದೇ ವೇಳೆ, ಸಹ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದಾರೆ.
ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ಪ್ರದೂಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಸೆಪ್ಟೆಂಬರ್ 16ರಂದು ಈ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಅದು ಹೈಕೋರ್ಟ್ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಲಿದೆ. ಆದ್ದರಿಂದ, ಸಾಕ್ಷ್ಯ ಹೇಳಿಕೆ ದಾಖಲಿಸಲು ಪ್ರದೂಷ್‌ಗೆ ಸಮನ್ಸ್ ಜಾರಿ ಮಾಡುವುದನ್ನು ತಡೆಹಿಡಿಯಬೇಕು ಎಂದು ಕೋರಿದರು.
ವಿಶೇಷ ಸರ್ಕಾರಿ ಅಭಿಯೋಜಕರು, ಪ್ರದೂಷ್ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಕುರಿತು ಬುಧವಾರ ಆದೇಶ ಮಾಡಬೇಕು ಎಂದು ಮನವಿ ಮಾಡಿದರು.
ಜೈಲಿನಲ್ಲಿ ತೊಂದರೆ, ಪವಿತ್ರಾ ಗೌಡ ವಕೀಲರ ಆರೋಪ:
ಪವಿತ್ರಾ ಗೌಡ ಪರ ವಕೀಲರು ವಾದ ಮಂಡಿಸಿ, ಸೆಲೆಬ್ರಿಟಿ ಸ್ಟೇಟಸ್‌ನಿಂದ ಪವಿತ್ರಾ ಗೌಡ ಜೈಲಿನಲ್ಲಿ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆಕೆಯ ವರ್ಚಸ್ಸಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ತನಗಿರುವ ತೊಂದರೆಗಳನ್ನು ವಿವರಿಸಿ ನ್ಯಾಯಾಲಯಕ್ಕೆ ಅವರು ಪತ್ರ ಬರೆಯಲು ಅನುಮತಿ ನೀಡಬೇಕು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ನ್ಯಾಯಾಲಯ, ಪವಿತ್ರಾ ಗೌಡಗೆ ಪ್ರತ್ಯೇಕ ಸೆಲ್ ಕಲ್ಪಿಸುವ ಬಗ್ಗೆ ಸೆಪ್ಟೆಂಬರ್ 7ರಂದು ಹೊರಡಿಸಿರುವ ಆದೇಶದ ಅನುಪಾಲನಾ ವರದಿ ಸಲ್ಲಿಸುವಂತೆ ಜೈಲು ಜೈಲು ಅಧಿಕಾರಿಗಳಿಗೆ ಸೂಚಿಸಿತು.