ಜು.2ರ ನಂದಿಬೆಟ್ಟದ ಸಂಪುಟ ಸಭೆಯಲ್ಲಿ ‘ದೇವನಹಳ್ಳಿ ಭೂ ಸಮಸ್ಯೆ' ವಿಶೇಷ ಅಜೆಂಡಾ ಆಗಲಿ : ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ
ಬೆಂಗಳೂರು : ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟ ಹೋಬಳಿ ವ್ಯಾಪ್ತಿಗೆ ಸೇರಿದ 13 ಗ್ರಾಮಗಳ 1777 ಎಕರೆ ಕೃಷಿ ಭೂಮಿ ಸ್ವಾಧೀನವನ್ನು ಕೈಬಿಡುವಂತೆ ಒತ್ತಾಯಿಸಿ ಜು.4ಕ್ಕೆ ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ‘ನಾಡ ಉಳಿಸಿ ಸಮಾವೇಶ’ ನಡೆಸಲು ರೈತ ಹಾಗೂ ಪ್ರಗತಿಪರ ಹೋರಾಟಗಾರರು ತೀರ್ಮಾನಿಸಿದ್ದಾರೆ.
ರವಿವಾರ ಈ ಸಂಬಂಧ ‘ಭೂಮಿ ಸತ್ಯಾಗ್ರಹ’ ನಡೆಯುತ್ತಿರುವ ಫ್ರೀಡಂ ಪಾರ್ಕ್‍ನಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ, ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕರ ಸಂಘಟನೆಗಳ ಮುಖಂಡರು ಸಭೆ ನಡೆಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಜುಲೈ 2ರಂದು ನಂದಿಬೆಟ್ಟದಲ್ಲಿ ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ‘ದೇವನಹಳ್ಳಿ ಭೂ ಸಮಸ್ಯೆ' ವಿಶೇಷ ಅಜೆಂಡಾ ಆಗಬೇಕೆಂದು ಒತ್ತಾಯಿಸುತ್ತಿದ್ದೇವೆ. ಎಲ್ಲ ಸಚಿವರೂ ರೈತರ ಪರವಾದ ನಿರ್ಣಯಕ್ಕೆ ಬರುತ್ತಾರೆಂಬ ವಿಶ್ವಾಸವಿದೆ. ದೇವನಹಳ್ಳಿಯ ಮೂಲಕವೇ ನಂದಿಬೆಟ್ಟಕ್ಕೆ ಹೋದವರು ಬರಿಗೈಯಲ್ಲಿ ಬಾರದಿರಿ ಎಂದು ಮನವಿ ಮಾಡಿದರು.
ಸರಕಾರದ ಮೇಲೆ ಒತ್ತಡ ಹೆಚ್ಚಿಸುವ ದೃಷ್ಟಿಯಿಂದ ಜು.4ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ‘ನಾಡ ಉಳಿಸಿ ಸಮಾವೇಶ’ವನ್ನು ಸಂಘಟಿಸಲು ತೀರ್ಮಾನಿಸಿದ್ದೇವೆ. ಈ ಸಮಾವೇಶದಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಚಿಂತಕರು ಸೇರಿದಂತೆ ರಾಜ್ಯದ ಎಲ್ಲ ತಾಲೂಕುಗಳಿಂದಲೂ ಸಮಾನ ಮನಸ್ಕರು ದೊಡ್ಡ ಸಂಖ್ಯೆಯಲ್ಲಿ ಸಮಾಗಮಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡ ನೂರ್ ಶ್ರೀಧರ್ ಮಾತನಾಡಿ, ರಾಜ್ಯ ಸರಕಾರದ ಮೇಲೆ ದೊಡ್ಡ ಚಾರಿತ್ರಿಕ ಹೊಣೆಗಾರಿಕೆಯಿದೆ. ಈ ಹೋರಾಟಲ್ಲಿರುವ ರೈತ ಕುಟುಂಬಗಳ ನೈತಿಕ ಶಕ್ತಿಯನ್ನು ಅರ್ಥ ಮಾಡಿಕೊಂಡು ನಂದಿಬೆಟ್ಟನಲ್ಲಿ ಜುಲೈ 2ರಂದು ನಡೆಯುವ ಸಂಪುಟ ಸಭೆಯಲ್ಲಿ ರೈತರ ಪರವಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಜುಲೈ 4ರಂದು ಸರಕಾರ ನಿಟ್ಟುಸಿರು ಬಿಡುವಂತಹ ತೀರ್ಮಾನ ತೆಗೆದುಕೊಂಡಲ್ಲಿ ಸಿದ್ದರಾಮಯ್ಯನವರನ್ನು ಹಾಗೂ ಅವರ ಸರಕಾರವನ್ನು ಅಭಿನಂದಿಸಿ ಫ್ರೀಡಂ ಪಾರ್ಕಿನಿಂದ ಹೊರಡುತ್ತೇವೆ. ಒಂದು ವೇಳೆ ಮತ್ತೊಮ್ಮೆ ನ್ಯಾಯ ನಿರಾಕರಣೆ ನಡೆದರೆ ಇನ್ನಷ್ಟು ಕಠಿಣ ಹೋರಾಟದ ದಿಟ್ಟ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ನೂರ್ ಶ್ರೀಧರ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಎಸ್. ವರಲಕ್ಷ್ಮಿ, ವಿ.ನಾಗರಾಜ್, ಡಿ.ಎಚ್.ಪೂಜಾರ್, ನಿರ್ಮಲಾ, ಶಿವಪ್ರಕಾಶ್, ಪಿ.ವಿ.ಲೋಕೇಶ್, ಯು. ಬಸವರಾಜ್, ದೇವಿ, ಕುಮಾರ್ ಸಮತಳ ಸೇರಿದಂತೆ ಇನ್ನಿತರರು ಹಾಜರಿದ್ದರು.