×
Ad

ದ್ವೇಷ ಭಾಷಣ ತಡೆ ಕಾಯ್ದೆ ಮೂಲಕ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಷಡ್ಯಂತ್ರ ನಡೆಯುತ್ತಿದೆ: ಬಸವರಾಜ ಬೊಮ್ಮಾಯಿ ವಾಗ್ದಾಳಿ

Update: 2025-12-23 17:31 IST

ಕಲಬುರಗಿ: ರಾಜ್ಯ ಸರಕಾರ ಜಾರಿಗೆ ತರಲು ನಿರ್ಧರಿಸುವ 'ದ್ವೇಷ ಭಾಷಣ ತಡೆ ಕಾಯ್ದೆ'ಯು ಘೋಷಿತ ತುರ್ತು ಪರಿಸ್ಥಿತಿಯಾಗಿದೆ. ಈ ಕಾಯ್ದೆ ಜಾರಿ ಮಾಡಿ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಈಗಾಗಲೇ, ಬಿಎನ್‌ಎಸ್ (BNS) ಕಾಯ್ದೆಯಲ್ಲಿ ಪ್ರಚೋದನಾಕಾರಿ ಭಾಷಣಗಳ ವಿರುದ್ಧ ಕ್ರಮಕ್ಕೆ ಅವಕಾಶವಿದೆ. ಹೀಗಿದ್ದರೂ ಹೊಸ ಕಾನೂನು ರೂಪಿಸುವ ಅಗತ್ಯವೇನಿತ್ತು? ಇದೊಂದು ಅಘೋಷಿತವಲ್ಲ, ಘೋಷಿತ ತುರ್ತು ಪರಿಸ್ಥಿತಿಯಂತೆ ಕಾಣಿಸುತ್ತಿದೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  

ರಾಜ್ಯ ಸರಕಾರದ ವೈಫಲ್ಯತೆಯನ್ನು ಪ್ರಶ್ನಿಸುವವರನ್ನು ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವವರನ್ನು ಜೈಲಿಗಟ್ಟಲು ಈ ಸಂಚು ರೂಪಿಸಲಾಗಿದೆ. ಇದರ ವಿರುದ್ಧ ನಾವು ಕಾನೂನು ಹೋರಾಟಕ್ಕೆ ಇಳಿಯಲಿದ್ದೇವೆ. ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಲಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿದೆ. ಇದನ್ನು ನಾವಷ್ಟೇ ಅಲ್ಲ, ಸ್ವತಃ ಆಡಳಿತ ಪಕ್ಷದ ಶಾಸಕರು ಮತ್ತು ಕೆಪಿಸಿಸಿ ಉಪಾಧ್ಯಕ್ಷರೇ ಪತ್ರದ ಮೂಲಕ ಒಪ್ಪಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ 'ಹೈ' ಇದೆ, ಆದರೆ 'ಕಮಾಂಡ್' ಇಲ್ಲವೇ ಇಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಹೈಕಮಾಂಡ್ ಈಗ ಎರಡು ಭಾಗವಾಗಿ ಹೋಗಿದೆ. ರಾಜ್ಯದಲ್ಲಿ ಉಂಟಾಗಿರುವ ನಾಯಕತ್ವದ ಗೊಂದಲಕ್ಕೆ ಹೈಕಮಾಂಡ್ ನೇರ ಹೊಣೆ. ಕರ್ನಾಟಕದ ಕಾಂಗ್ರೆಸ್ ನಾಯಕರು ಪರಿಣಿತರಾಗಿದ್ದಾರೆ, ಇಲ್ಲಿಂದಲೇ ಎಲ್ಲವೂ ದಿಲ್ಲಿಗೆ ಹೋಗುತ್ತಿರುವಾಗ ಅವರು ಹೈಕಮಾಂಡ್ ಮಾತನ್ನು ಯಾಕೆ ಕೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.  

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ, ಭಿನ್ನಾಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಹಳೆಯ ಬೇರು ಹೊಸ ಚಿಗುರಿನಂತೆ ನಾವೆಲ್ಲರೂ ಒಟ್ಟಾಗಿ ಹೋಗುತ್ತಿದ್ದೇವೆ. ಭಿನ್ನರ ಬಣ ಎನ್ನುವುದು ಕೇವಲ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಪ್ರಕ್ರಿಯೆಯ ಭಾಗವಷ್ಟೇ ಎಂದು ಹೇಳಿದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News