ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನು ಆತುರದಲ್ಲಿ ಅಂಗೀಕರಿಸಿಲ್ಲ: ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಣೆ
ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನು ವಿಧಾನಸಭೆಯಲ್ಲಿ ಆತುರದಲ್ಲಿ ಅಂಗೀಕರಿಸಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದರು.
ಸೋಮವಾರ ವಿಧಾನಸೌಧದಲ್ಲಿ ಅಧಿವೇಶನದ ಕಾರ್ಯಕಲಾಪಗಳ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕದ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಲ್ಲಿ ಬೇರೆ ಬೇರೆ ವಿಷಯದ ಬಗ್ಗೆ ಚರ್ಚೆಗಳನ್ನು ಮಾಡಿದ್ದರಿಂದ ಗೊಂದಲ ಉಂಟಾಯಿತು ಎಂದು ಹೇಳಿದರು.
ಅತ್ಯಂತ ಮಹತ್ವದ ವಿಧೇಯಕದ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರು ಬಾವಿಗೆ ಇಳಿದು ಪ್ರತಿಭಟನೆಯಲ್ಲಿ ತೊಡಗಿದರೆ ಏನು ಮಾಡಬೇಕು. ಇದೇ ವಿಧೇಯಕದ ಕುರಿತು ವಿಧಾನಪರಿಷತ್ತಿನಲ್ಲಿ ವಿವರವಾಗಿ ಚರ್ಚೆ ನಡೆದಿದೆ. ವಿಧಾನಸಭೆಯಲ್ಲೂ ಚರ್ಚೆಗೆ ಮುಕ್ತ ಅವಕಾಶವಿದ್ದರೂ ವಿಪಕ್ಷಗಳು ಚರ್ಚೆಯಲ್ಲಿ ಭಾಗವಹಿಸಿಲ್ಲ ಎಂದು ಖಾದರ್ ಹೇಳಿದರು.
ಬೆಳಗಾವಿಯಲ್ಲಿ ಮಳೆಗಾಲದ ಅಧಿವೇಶನ ನಡೆಸಲು ಚರ್ಚೆ:
ಚಳಿಗಾಲದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮಗಳು, ಶುಭ ಕಾರ್ಯಗಳು ನಿಗದಿಯಾಗಿರುತ್ತವೆ. ಸಚಿವರು, ಶಾಸಕರು ಕಾರ್ಯಕ್ರಮಗಳನ್ನು ನಿಗದಿ ಮಾಡಿಕೊಂಡಿರುತ್ತಾರೆ. ಆದುದರಿಂದ, ಬೆಳಗಾವಿಯಲ್ಲಿ ಚಳಿಗಾಲದ ಬದಲಾಗಿ, ಮಳೆಗಾಲದ ಅಧಿವೇಶನ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿರುವ ಸ್ಪೀಕರ್ ಪೀಠಕ್ಕೆ 43 ಲಕ್ಷ ರೂ. ಖರ್ಚು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾದರ್, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಮತ್ತು ಲೋಕೋಪಯೋಗಿ ಇಲಾಖೆಯವರು ಅದನ್ನು ಮಾಡಿದ್ದಾರೆ. ನಮಗೆ ಪೀಠದ ಇತಿಹಾಸ ಗೊತ್ತು. ಖರ್ಚಿನ ಬಗ್ಗೆ ಗೊತ್ತಿಲ್ಲ. ನಮ್ಮ ವಿಧಾನಸಭೆಯಲ್ಲಿರುವ ಸ್ಪೀಕರ್ ಪೀಠದ ಮಾದರಿಯನ್ನು ಉತ್ತರಪ್ರದೇಶದ ವಿಧಾನಸಭಾಧ್ಯಕ್ಷರು ಇಷ್ಟಪಟ್ಟು, ಅಲ್ಲಿ ಮಾಡಿಸುತ್ತಿದ್ದಾರೆ. ಇದು ನಮಗೂ ಹೆಮ್ಮೆ ಎಂದು ಹೇಳಿದರು.
ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹ ಲಕ್ಷ್ಮಿ ಕಂತು ಬಿಡುಗಡೆ ಕುರಿತು ತಪ್ಪು ಉತ್ತರ ನೀಡಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್, ಸಚಿವೆ ಸದನದಲ್ಲಿ ತಪ್ಪು ಉತ್ತರ ಕೊಟ್ಟಿದ್ದರು. ನಂತರ ಕ್ಷಮೆಯನ್ನು ಯಾಚಿಸಿದ್ದಾರೆ. ಅಲ್ಲದೇ, ಈ ಲೋಪಕ್ಕೆ ಕಾರಣವೇನು ಎಂಬುದರ ಕುರಿತು ಇಲಾಖೆಯಲ್ಲಿ ತನಿಖೆ ಮಾಡುವುದಾಗಿಯೂ ಹೇಳಿದ್ದಾರೆ ಎಂದು ತಿಳಿಸಿದರು.
57 ಗಂಟೆ 35 ನಿಮಿಷ ಕಲಾಪ ನಡೆದಿದೆ:
10 ದಿನಗಳಲ್ಲಿ 57 ಗಂಟೆ 35 ನಿಮಿಷ ಕಲಾಪ ನಡೆದಿದೆ. 23 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ 39 ಸದಸ್ಯರು 17 ಗಂಟೆ 2 ನಿಮಿಷ ಚರ್ಚೆ ಮಾಡಿದ್ದಾರೆ. ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲು 7 ನಿರ್ಣಯಗಳನ್ನು ಮಂಡಿಸಿ ಸದನವು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಅವರು ಹೇಳಿದರು.
2109 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 134 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 1974 ಪ್ರಶ್ನೆಗಳ ಪೈಕಿ 1750 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ನಿಯಮ 351ರಡಿಯಲ್ಲಿ 180 ಸೂಚನೆಗಳನ್ನು ಅಂಗೀಕರಿಸಿದ್ದು, 70 ಸೂಚನೆಗಳಿಗೆಗೆ ಉತ್ತರ ಕೊಡಲಾಗಿದೆ. ಗಮನ ಸೆಳೆಯುವ 368 ಸೂಚನೆಗಳ ಪೈಕಿ 228 ಸೂಚನೆಗಳಿಗೆ ಉತ್ತರ ನೀಡಲಾಗಿದೆ. ಶೂನ್ಯವೇಳೆಯಲ್ಲಿ 2 ಸೂಚನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಖಾದರ್ ಮಾಹಿತಿ ನೀಡಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಅಧಿವೇಶನ ವೀಕ್ಷಣೆ ಮಾಡಿದ್ದಾರೆ. ಸುವರ್ಣ ವಿಧಾನಸೌಧದ ಆವರಣದಲ್ಲಿ ಉದ್ಯಾನವನದ ಉದ್ಘಾಟನೆ ಮಾಡಲಾಗಿದೆ. ವಿಶ್ವದಲ್ಲೇ ಎರಡನೇ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ ಕಾರ್ಯಕ್ರಮ ಮಾಡಲಾಗಿದೆ ಎಂದು ಅವರು ವಿವರ ನೀಡಿದರು.