ಶಾಲಾ-ಕಾಲೇಜುಗಳ ಆವರಣ ಸುತ್ತಮುತ್ತ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ ಫುಡ್ ಮಾರಾಟ ನಿಷೇಧ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಶಾಲಾ-ಕಾಲೇಜುಗಳ ಆವರಣ ಮತ್ತು ಸುತ್ತಮುತ್ತ 50 ಮೀಟರ್ ವ್ಯಾಪ್ತಿಯಲ್ಲಿ ಕುರುಕಲು ತಿಂಡಿಗಳ (ಜಂಕ್ ಫುಡ್) ಮಾರಾಟ ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಶುಕ್ರವಾರ ನಗರದ ಆರೋಗ್ಯಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕ ಕೊಬ್ಬು, ಅಧಿಕ ಸಕ್ಕರೆ ಹಾಗೂ ಅಧಿಕ ಉಪ್ಪು ಹೊಂದಿರುವ ಆಹಾರ ಪದಾರ್ಥಗಳು ಮತ್ತು ಪಾನೀಯಗಳು ಆರೋಗ್ಯಕ್ಕೆ ಮಾರಕ. ವಿದ್ಯಾರ್ಥಿಗಳಿಗೆ ಸುರಕ್ಷಿತ, ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರ ಲಭ್ಯತೆಯನ್ನು ಖಚಿತಪಡಿಸುವ ಉದ್ದೇಶದಿಂದ ಇಲಾಖೆಯು ಜುಲೈ ತಿಂಗಳು ರಾಜ್ಯದಾದ್ಯಂತ 134 ಶಾಲೆ ಕಾಲೇಜುಗಳ ಆವರಣದಲ್ಲಿ ಪರಿಶೀಲನೆ ನಡೆಸಿದೆ ಎಂದರು.
ಈ ಪರಿಶೀಲನೆ ಅವಧಿಯಲ್ಲಿ ಸಂಶಯಾಸ್ಪದ 53 ಆಹಾರ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯದ ವಿಶ್ಲೇಷಣೆಗೆ ಕಳುಹಿಸಲಾಗಿದೆ. ನೂರಕ್ಕೂ ಅಧಿಕ ಕಡೆ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುರುಕಲು ತಿಂಡಿಗಳ ಮಾರಾಟ ಗಮನಕ್ಕೆ ಬಂದಿದ್ದು, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮಾರಾಟ ನಿಷೇಧಿಸಲಾಗಿದೆ. ಶಾಲಾ-ಕಾಲೇಜು ಆವರಣದಲ್ಲಿ ಕುರುಕಲು ತಿಂಡಿಗಳನ್ನು ಮಾರಾಟ ಮಾಡಿದಲ್ಲಿ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು. 3 ಲಕ್ಷ ರೂ. ವರೆಗೂ ದಂಡ ವಿಧಿಸಲು ಅವಕಾಶವಿದೆ. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳಿಗೂ ಅರಿವು ಮೂಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಶಾಲಾ-ಕಾಲೇಜು ಆವರಣದಲ್ಲಿ ಕುರುಕಲು ತಿಂಡಿಗಳನ್ನು ಮಾರಾಟ ಮಾಡದಂತೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೂ ಕ್ರಮವಹಿಸಬೇಕು. ಎಚ್ಚರಿಕೆ ಫಲಕಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಶಾಲೆಗಳ ಸಮೀಪದಲ್ಲಿರುವ ಎಲ್ಲ ಆಹಾರ ಮಳಿಗೆಗಳು, ಹೊಟೇಲ್‍ಗಳು, ಬೇಕರಿಗಳು, ಕ್ಯಾಂಟೀನ್‍ಗಳು ಹಾಗೂ ಇತರ ಆಹಾರೋದ್ಯಮ ಸಂಸ್ಥೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿ ಕಡ್ಡಾಯವಾಗಿ ನೋಂದಣಿಯಾಗಿ, ಪರವಾನಗಿ ಪಡೆಯಬೇಕು. ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ಮಾನಂಡಗಳನ್ನು ಪಾಲಿಸಬೇಕು ಎಂದು ಅವರು ಹೇಳಿದರು.
ಆಹಾರ ಸುರಕ್ಷತಾ ಅಧಿಕಾರಿಗಳು ಶಾಲಾ–ಕಾಲೇಜುಗಳ ಸುತ್ತಮುತ್ತಲಿನ ಆಹಾರ ಮಳಿಗೆಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಪರವಾನಗಿ ರದ್ಧತಿಯಂತಹ ಕ್ರಮಕ್ಕೆ ಕಾನೂನಿನಡಿ ಅವಕಾಶವಿದೆ. ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳು ಆಹಾರ ಸುರಕ್ಷತಾ ಮಾರ್ಗಸೂಚಿ ಅನುಸಾರ ಇರಬೇಕು. ಸುರಕ್ಷಿತ ಹಾಗೂ ಸಮತೋಲನ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಖಾದರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಕೆ.ಶ್ರೀನಿವಾಸ, ಆರೋಗ್ಯ ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಉಪಸ್ಥಿತರಿದ್ದರು.