ತಮಿಳುನಾಡು ಸಿಎಂ ವಿಜಯ್ ಕರ್ನಾಟಕಕ್ಕೆ ಬರುವುದು ಬೇಡ ಎಂದ ಡಿ.ಕೆ.ಶಿವಕುಮಾರ್; ಕಾರಣವೇನು?
ವಿಜಯ್ (PC : PTI)/ಡಿ.ಕೆ.ಶಿವಕುಮಾರ್
ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿಚಾರ ಸಂಬಂಧ ಇದೀಗ ರಾಜ್ಯದಲ್ಲಿ ಬಿಗುವಿನ ವಾತಾವರಣ ಉಲ್ಬಣಗೊಂಡಿರುವ ಹಿನ್ನೆಲೆ ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಕರ್ನಾಟಕ ರಾಜ್ಯಕ್ಕೆ ಆಗಮಿಸುವುದು ಬೇಡ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ನಮ್ಮ ಜತೆ ಮಾತುಕತೆಗೆ ಒಲವು ತೋರಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಶಾಂತ ಪರಿಸ್ಥಿಯಲ್ಲಿ ಮಾತುಕತೆ ನಡೆಸಬೇಕು. ಈಗ ಕಾವೇರಿ ವಿಚಾರಕ್ಕೆ ರಾಜ್ಯದಲ್ಲಿ ಬಿಗುವಿನ ವಾತಾವರಣ ಇದೆ. ಹೀಗಾಗಿ ಅವರು ಕರ್ನಾಟಕಕ್ಕೆ ಭೇಟಿ ನೀಡುವುದು ಬೇಡ ಎಂದು ಮನವಿ ಮಾಡಿದರು.
ನೀರು ಹಂಚಿಕೆ ವಿಚಾರ ಕುರಿತು ಈ ಹಿಂದೆ ನಾನೇ ತಮಿಳುನಾಡಿಗೆ ಹೋಗಲು ಮನವಿ ಮಾಡಿದ್ದೆ. ಆದರೆ, ಆಗಿನ ಸರಕಾರ ಅನುಮತಿ ನೀಡಿರಲಿಲ್ಲ, ನಂತರ ಚುನಾವಣೆ ನಡೆದು ಸರಕಾರ ಬದಲಾಗಿದೆ. ಈಗ ವಿಜಯ್ ಅವರು ತಮ್ಮ ತಂಡದೊಂದಿಗೆ ಕರ್ನಾಟಕಕ್ಕೆ ಬರುವುದಾಗಿ ತಿಳಿಸಿದ್ದರು. ಇದರ ನಡುವೆ ರಾಜ್ಯದಲ್ಲಿ ನೀರಿನ ವಿಚಾರವಾಗಿ ಪ್ರತಿಭಟನೆಗಳು ಆರಂಭಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಭೆಯನ್ನು ಕೆಲ ದಿನಗಳ ಕಾಲ ಮುಂದೂಡುವಂತೆ ತಮಿಳುನಾಡು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಯಾರೇ ಆಗಲಿ ಹೊರಗಿನಿಂದ ಅತಿಥಿಗಳು ಬರುವಾಗ ನಾವು ಸೌಹಾರ್ದತೆ ಹಾಗೂ ಗೌರವಪೂರ್ವಕವಾಗಿ ಆತಿಥ್ಯವಹಿಸಬೇಕು. ಹೀಗಾಗಿ, ಈ ಭೇಟಿ ಮತ್ತೊಂದು ದಿನ ನಡೆಯಲಿದೆ ಎಂದರು.
ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವುದರಿಂದ ಕರ್ನಾಟಕಕ್ಕೆ ಆಗುತ್ತಿರುವ 33 ಟಿಎಂಸಿ ನೀರಿನ ನಷ್ಟವನ್ನು ತಡೆಯಲು ಸಮತೋಲಿತ ಅಣೆಕಟ್ಟು ನಿರ್ಮಾಣ ಸೇರಿದಂತೆ ಅನೇಕ ಪರ್ಯಾಯ ಆಯ್ಕೆ, ನದಿ ಜೋಡಣೆ ವಿಚಾರ ಕುರಿತು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಹಾಗೂ ತೆಲಂಗಾಣ, ಆಂಧ್ರಪ್ರದೇಶ ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿತ್ತು.
ಆನಂತರ, ಇದನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 90-10ರ ಅನುಪಾತದಲ್ಲಿ ಕೈಗೆತ್ತಿಕೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕಾಗಿ ಹೀಗಾಗಿ ಸಿ.ಆರ್.ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೇ ಮಾದರಿಯಲ್ಲಿ ತಮಿಳುನಾಡು ಸಿಎಂ ಅವರೊಂದಿಗೆ ಚರ್ಚೆ ನಡೆಸಬೇಕಾಗಿತ್ತು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು, ಬಿಜೆಪಿ ಸ್ನೇಹಿತರು, ರೈತ ಸಂಘಟನೆಗಳು ಹೋರಾಟ ನಡೆಸುತ್ತಿದ್ದಾರೆ. ಅವರು ಹೋರಾಟ ತಪ್ಪು ಎಂದು ಹೇಳುವುದಿಲ್ಲ. ನಮ್ಮ ಸರಕಾರ ಯಾವ ಸಂದರ್ಭದಲ್ಲೂ ರೈತರನ್ನು ಕೈ ಬಿಟ್ಟಿಲ್ಲ. ಹೀಗಿರುವಾಗ ಬಿಜೆಪಿ ನಾಯಕರು ಇಂದು ಹೋರಾಟ ಮಾಡುವ ಅಗತ್ಯವಿರಲಿಲ್ಲ ಎಂದು ಶಿವಕುಮಾರ್ ತಿಳಿಸಿದರು.