×
Ad

ಬೆಂಗಳೂರು ಉಪನಗರ ಸಾರಿಗೆ ಯೋಜನೆ| 16,876 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಅನುಮೋದನೆ

Update: 2026-01-02 22:51 IST

ಬೆಂಗಳೂರು,ಜ.2: ಬೆಂಗಳೂರು ಉಪನಗರ ಸಾರಿಗೆ ಯೋಜನೆಯ ಕಾರಿಡಾರ್ 2 ಮತ್ತು 4ರ ಪರಿಷ್ಕೃತ ಅಂದಾಜು ವೆಚ್ಚ 16,876 ಕೋಟಿ ರೂ.ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಇತರ ನಿರ್ಣಯಗಳು: ದೇವನಹಳ್ಳಿ ತಾಲೂಕಿನ ಗುಟ್ಟಹಳ್ಳಿ ಗ್ರಾಮದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ನೀಡಲಾಗಿರುವ ವಸತಿ ಬಡಾವಣೆಯಲ್ಲಿನ 3,300.16 ಚ.ಮೀ.ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನವನ್ನು ‘ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು’ ಇವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ನಿರ್ಧರಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ 100 ಹಾಸಿಗೆಗಳ ಹೊಸ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು 40 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ.  

6 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ನಾಗರಿಕ ಸೌಲಭ್ಯ ನಿವೇಶನಗಳನ್ನು ಬ್ಲಾಕ್ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ‘ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು’ ಇವರಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ನಿರ್ಧಾರಿಸಲಾಗಿದೆ.  

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಶೇಖರೋಜಾ ಸರ್ವೆ ನಂ.111/2ರಲ್ಲಿನ 2338.91 ಚ.ಮೀ ವಿಸ್ತೀರ್ಣವುಳ್ಳ ನಾಗರಿಕ ಸೌಲಭ್ಯ ನಿವೇಶನ ಪಿ.ಎಲ್-01 ಅನ್ನು ಶಿಕ್ಷಕರ ಭವನ ನಿರ್ಮಿಸಲು ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ ಹಾಗೂ ಕಲಬುರಗಿ ಜಿಲ್ಲಾ ಸಂಘಕ್ಕೆ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.  

2025-26ನೆ ಸಾಲಿಗೆ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳಿಗೆ ಅಗತ್ಯವಿರುವ 41,685 ಪಿಠೋಪಕರಣಗಳನ್ನು ಕೆಎಸ್‍ಎಫ್‍ಐಸಿಯಿಂದ ನೇರ ಖರೀದಿಯ ಮೂಲಕ ಅಂದಾಜು 8.67 ಕೋಟಿ ರೂ.ವೆಚ್ಚದಲ್ಲಿ ಮತ್ತು ಅಲ್ಪಾವಧಿಯ ಟೆಂಡರ್ ಮೂಲಕ ಅಂದಾಜು 26.67 ಕೋಟಿ ರೂ.ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.  

100 ಪಶುವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು 50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಬಾರ್ಡ್ ಅನುದಾನದೊಂದಿಗೆ ನಿರ್ಮಿಸಲು ಹಾಗೂ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಮಗಳು ಚೈತನ್ಯಾ ಮಹಾಂತೇಶ್ ಅವರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ, ರಾಜ್ಯ ಸರಕಾರ ಸಚಿವಾಲಯದ ‘ಗ್ರೂಪ್ ಸಿ’ ಸೇವೆಗೆ ಅನುಕಂಪದ ಆಧಾರದ ಮೇಲೆ ನೇಮಕ ಮಾಡಲು ನಿರ್ಧರಿಸಲಾಗಿದೆ.  

ಹೈದರಾಬಾದ್‍ನ ಐಐಟಿ ಸಹಯೋಗದೊಂದಿಗೆ ಹೊಸ ‘ಕರ್ನಾಟಕ ಜಿಎಸ್‍ಟಿ ಅನಲೈಟಿಕ್ಸ್ ಪೋರ್ಟಲ್’ 19 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಹಾಗೂ ಕಾರ್ಯಗತಗೊಳಿಸಲು ಅನುಮೋದನೆ ನೀಡಲಾಗಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News