×
Ad

ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರಕಾರದ ತೀರ್ಮಾನಕ್ಕೆ ತಲೆಬಾಗುವೆ: ಸಭಾಪತಿ ಬಸವರಾಜ ಹೊರಟ್ಟಿ

Update: 2025-12-08 16:01 IST

ಬಸವರಾಜ ಹೊರಟ್ಟಿ

ಬೆಳಗಾವಿ(ಸುವರ್ಣ ವಿಧಾನಸೌಧ) : ಪರಿಷತ್ ಕಲಾಪದಲ್ಲಿ ತಮ್ಮ ವಿರುದ್ಧ ‘ಅವಿಶ್ವಾಸ ನಿರ್ಣಯ’ ಮಂಡಿಸಿದರೆ ಸರಕಾರದ ತೀರ್ಮಾನಕ್ಕೆ ತಲೆಬಾಗುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ.

ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಧಿವೇಶನದಲ್ಲಿ ತಮ್ಮ ವಿರುದ್ಧ ಸರಕಾರ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಮಂಡನೆ ಮಾಡಿದರೆ ಅದಕ್ಕೆ ತಲೆಬಾಗಲೇಬೇಕಾಗುತ್ತದೆ ಎಂದು ಹೇಳಿದರು.

ಅವಿಶ್ವಾಸ ನಿರ್ಣಯ ಮಂಡಿಸುವುದು ಬಿಡುವುದು ಸರಕಾರದ ತೀರ್ಮಾನಕ್ಕೆ ಬಿಟ್ಟಿರುವ ವಿಷಯ. ಸಭಾಪತಿಯಾಗಿ ನಾನು ಸದನದ ನಿಯಮಗಳ ಅಡಿ ಕಲಾಪ ನಡೆಸುವುದು ನನ್ನ ಕರ್ತವ್ಯ .ಉಳಿದ ವಿಷಯಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಕೆಲವು ಸದಸ್ಯರು ನನಗೆ ಸದನದಲ್ಲಿ ಬಹುಮತವಿಲ್ಲ ನೈತಿಕ ರಾಜೀನಾಮೆ ನೀಡಬೇಕೆಂದು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದು ಸಭಾಪತಿ ಸ್ಥಾನಕ್ಕೆ ಗೌರವ ತರುವುದಿಲ್ಲ. ಸದನದಲ್ಲಿ ಸದಸ್ಯರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಅವರು ನುಡಿದರು.

ಬಹುಮತ ಇದೆಯೋ ಇಲ್ಲವೋ ಸರಕಾರಕ್ಕೆ ಬಿಟ್ಟ ವಿಚಾರ. ಸದನದ ತೀರ್ಮಾನ ಅಂತಿಮ. ಚರ್ಚೆಗೆ ಬಂದರೆ ನಿಯಮದ ಪ್ರಕಾರ ಹೋಗುತ್ತೇನೆ. ಆದರೆ, ವಿಧಾನ ಪರಿಷತ್‍ನಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಇತಿಹಾಸ ಇಲ್ಲ ಎಂದು ಬಸವರಾಜ ಹೊರಟ್ಟಿ ಸ್ಪಷ್ಟಣೆ ನೀಡಿದರು.

ನೀತಿ ನಿರೂಪಣಾ ಸಮಿತಿ:  ಕಳೆದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಬಿಜೆಪಿ ಸದಸ್ಯ ಸಿ.ಟಿ.ರವಿ ನಡುವಿನ ಜಟಾಪಟಿ ಘಟನೆಯನ್ನು 2025ರ ಜನವರಿ 18ಕ್ಕೆ ನೀತಿ ನಿರೂಪಣಾ ಸಮಿತಿಗೆ ಕೊಡಲಾಗಿದೆ. ನೀತಿ ನಿರೂಪಣಾ ಸಮಿತಿ ಎರಡು ಬಾರಿ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಇಬ್ಬರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ನಮ್ಮ ಕಡೆಯಿಂದ ಏನಾಗಬೇಕೋ ಅದನ್ನು ಮಾಡಿದ್ದೇವೆ. ಜವಾಬ್ದಾರಿಯಿಂದ ನಮ್ಮ ಕೆಲಸ ನಿರ್ವಹಣೆ ಮಾಡಿದ್ದೇವೆ. ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಒಂದೇ ವೇಳೆ ಒಂದು ಪೈಸೆ ಭ್ರಷ್ಟಾಚಾರ ಆಗಿದೆ ಎಂದು ಸಾಬೀತಾದರೆ ಒಂದು ಕ್ಷಣ ನಾನು ಸಭಾಪತಿ ಸ್ಥಾನದಲ್ಲಿ ಇರುವುದಿಲ್ಲ. ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಆಗಿದೆ. 30 ಹುದ್ದೆಗಳನ್ಮು ಕೆಇಎ ಮೂಲಕ ನೇಮಕಾತಿ ಮಾಡಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News