ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ವರದಿ ಸಲ್ಲಿಸಲು ಮತ್ತೆ ಕಾಲಾವಕಾಶಕ್ಕೆ ಸರ್ಕಾರ ಮನವಿ
File Photo
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಿಂದ 11 ಆರ್‌ಸಿಬಿ ಅಭಿಮಾನಿಗಳ ಸಾವು ಪ್ರಕರಣದಲ್ಲಿ 10 ದಿನಗಳಲ್ಲಿ ನ್ಯಾಯಾಂಗ ತನಿಖೆಯ ವರದಿ ಬರುವ ಸಾಧ್ಯತೆಯಿದೆ. ಹೀಗಾಗಿ ಮುಚ್ಚಿದ ಲಕೋಟೆಯಲ್ಲಿನ ವರದಿ ಬಹಿರಂಗ ಬೇಡ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮನವಿ ಮಾಡಿದೆ.
ಈ ಕುರಿತು ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರ ಪರ ಎಜಿ ಶಶಿಕಿರಣ್ ಶೆಟ್ಟಿ ಹಾಜರಾಗಿ, 10 ದಿನಗಳಲ್ಲಿ ನ್ಯಾಯಾಂಗ ತನಿಖೆಯ ವರದಿ ಬರುವ ಸಾಧ್ಯತೆಯಿದೆ. ಹೀಗಾಗಿ ಮುಚ್ಚಿದ ಲಕೋಟೆಯಲ್ಲಿನ ಸರ್ಕಾರದ ವರದಿ ಬಹಿರಂಗ ಬೇಡ. ಅರ್ಜಿ ವಿಚಾರಣೆಯನ್ನು 10 ದಿನ ಮುಂದೂಡಲು ಮನವಿ ಮಾಡಿದರು.
ಈ ವೇಳೆ ಸರ್ಕಾರದ ಮನವಿಗೆ ಅಮೈಕಸ್ ಕ್ಯೂರಿ ಎಸ್. ಸುಶೀಲಾ, ಸರ್ಕಾರದ ವರದಿ ಮುಚ್ಚಿದ ಲಕೋಟೆಯಲ್ಲಿಡಲು ಕಾನೂನಿನಲ್ಲಿ ಅವಕಾಶವಿಲ್ಲ. ಪಾರದರ್ಶಕವಾದ ಪ್ರಕ್ರಿಯೆ ನಡೆಸಲು ಅವಕಾಶ ನೀಡಬೇಕು. ಹೀಗಾಗಿ ಸರ್ಕಾರ ಸಲ್ಲಿಸಿರುವ ವರದಿಯ ಪ್ರತಿ ನೀಡುವಂತೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮುಂದುವರೆಸಿ, ನ್ಯಾಯಾಂಗ ತನಿಖೆಯ ವರದಿ ಇನ್ನು 10 ದಿನಗಳಲ್ಲಿ ಬರುವ ಸಾಧ್ಯತೆಯಿದೆ. ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ವರದಿ ಬಿಡುಗಡೆ ಬೇಡ. ಸರ್ಕಾರದ ವರದಿಯನ್ನು ಸಂಬಂಧಪಟ್ಟವರು ತಮ್ಮ ಅನುಕೂಲಕ್ಕೆ ಬಳಸಬಾರದು. ಹೀಗಾಗಿಯೇ ಇದನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸಲಾಗಿದೆ. ಪೊಲೀಸರು, ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ, ಜನಸಾಮಾನ್ಯರು ನ್ಯಾಯಾಂಗ ಆಯೋಗದ ಮುಂದೆ ಹೇಳಿಕೆ ನೀಡುತ್ತಿದ್ದಾರೆ. 10 ದಿನಗಳ ಬಳಿಕ ಮುಚ್ಚಿದ ಲಕೋಟೆಯಲ್ಲಿನ ವರದಿ ಪರಿಶೀಲಿಸಬಹುದು. ಹೀಗಾಗಿ 10 ದಿನಗಳ ಕಾಲ ವಿಚಾರಣೆ ಮುಂದೂಡುವಂತೆ ಎಜಿ ಮನವಿ ಮಾಡಿದರು.
ನಿನ್ನೆ ಒಡಿಶಾದ ಪುರಿಯಲ್ಲಿಯೂ ಕಾಲ್ತುಳಿತದಲ್ಲಿ ಜನರು ಮೃತಪಟ್ಟಿದ್ದಾರೆ. ಘಟನೆ ದಿನ ಲಕ್ಷಾಂತರ ಯುವಕರು ರಸ್ತೆಯಲ್ಲಿರುವುದನ್ನು ನಾನೂ ನೋಡಿದ್ದೇನೆ. ನ್ಯಾಯಾಂಗ ತನಿಖೆಯ ವರದಿಯ ಬಳಿಕ ಪಿಐಎಲ್ ವಿಚಾರಣೆ ನಡೆಸುವುದು ಸೂಕ್ತ ಎಂದು ಹಿರಿಯ ವಕೀಲ ಉದಯ್ ಹೊಳ್ಳ ಮನವಿ ಮಾಡಿದರು.
ಈ ವೇಳೆ ವಾದ ಮುಂದುವರೆಸಿ, ಇತಿಹಾಸದಲ್ಲಿಯೇ ಯಾರೂ ಕೈಗೊಳ್ಳದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಹಲವರನ್ನು ಹುದ್ದೆಯಿಂದ ಸರ್ಕಾರ ಅಮಾನತುಗೊಳಿಸಿದೆ. ಇಷ್ಟೆಲ್ಲಾ ಕ್ರಮ ಬೇಕಿರಲಿಲ್ಲವೆಂದು ಹೇಳುವವರೂ ಇದ್ದಾರೆ. ಕಾಲ್ತುಳಿತ ಪ್ರಕರಣದಲ್ಲಿ ಇಂತಹ ಕ್ರಮ ಯಾವ ಸರ್ಕಾರವೂ ಕೈಗೊಂಡಿರಲಿಲ್ಲ ಎಂದು ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.