×
Ad

57 ಗಂಟೆ ನಡೆದ ಹತ್ತು ದಿನಗಳ ಅಧಿವೇಶನ ಕಲಾಪ : ಸ್ಪೀಕರ್ ಯು.ಟಿ.ಖಾದರ್

Update: 2025-12-19 20:30 IST

ಬೆಳಗಾವಿ : ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿ.8ರಿಂದ 19ರ ವರೆಗೆ 10 ದಿನಗಳ ಕಾಲ ನಡೆದ ವಿಧಾನಸಭೆ ಅಧಿವೇಶನವು ಸುಮಾರು 57 ಗಂಟೆ 35 ನಿಮಿಷಗಳ ಕಾಲ ಕಲಾಪ ನಡೆಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರಕಟಿಸಿದರು.

ಶುಕ್ರವಾರ ಅಧಿವೇಶನ ಅನಿಧಿರ್ಷಾವಧಿಗೆ ಮುಂದೂಡಿಕೆ ಮುನ್ನ ಕಲಾಪದಲ್ಲಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ.

ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕವೂ ಸೇರಿದಂತೆ ಒಟ್ಟು 22 ವಿಧೇಯಕಗಳನ್ನು ಮಂಡಿಸಿ. ವಿಧಾನಸಭೆಯ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ, ಕರ್ನಾಟಕ ಭೂಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವು ಸೇರಿದಂತೆ ಒಟ್ಟು 23 ವಿಧೇಯಕಗಳನ್ನು ಪರ್ಯಾಲೋಚಿಸಿ, ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

ನಿಯಮ 60 ರಡಿಯಲ್ಲಿ ನೀಡಿದ್ದ 1 ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚಿಸಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ 39 ಸದಸ್ಯರುಗಳು ಭಾಗವಹಿಸಿದ್ದು, ಸುಮಾರು 17 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

2109 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 134 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 1974 ಪ್ರಶ್ನೆಗಳ ಪೈಕಿ 1750 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ನಿಯಮ 351 ರಡಿಯಲ್ಲಿ 180 ಸೂಚನೆಗಳನ್ನು 70 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.

ರಾಯಚೂರು ಜಿಲ್ಲೆಯಲ್ಲಿ ತಕ್ಷಣವೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಅನ್ನು ಸ್ಥಾಪಿಸುವುದು ಸೇರಿದಂತೆ ಏಳು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು.

ಸುಗಮ ಕಲಾಪಕ್ಕೆ ಸಹಕಾರ ನೀಡಿದ ಸಭಾ ನಾಯಕರಾದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಿಗೆ, ಸಚಿವ ಸಂಪುಟದ ಸದಸ್ಯರಿಗೆ, ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ನಾಡಿನ ಜನತೆಗೆ ಮುಂಬರುವ 2026ರ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಪ್ರಕಟಿಸಿದ ಸ್ಪೀಕರ್ ಖಾದರ್, ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News