×
Ad

ವಿಧಾನ ಮಂಡಲ ಅಧಿವೇಶನಕ್ಕೆ ತೆರೆ; ಕಲಾಪದಲ್ಲೂ ಗಮನ ಸೆಳೆದ ‘ನಾಯಕತ್ವ ಬದಲಾವಣೆ’ ಪೈಪೋಟಿ

Update: 2025-12-19 20:24 IST

ಬೆಳಗಾವಿ : ರಾಜ್ಯದ ಗಡಿ ಜಿಲ್ಲೆ ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಎರಡು ವಾರಗಳಿಂದ ನಡೆಯುತ್ತಿದ್ದ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವ ಬದಲಾವಣೆಯ ಪೈಪೋಟಿ, ಬಣ ರಾಜಕೀಯ, ಆಪ್ತರ ಔತಣಕೂಟಗಳು ಗಮನ ಸೆಳೆದವು.

ಈ ಮಧ್ಯೆ ಮತ್ತೊಂದೆಡೆ ನೆರೆ ಸಂತ್ರಸ್ತರಿಗೆ ಪರಿಹಾರ, ಕೃಷಿ ಉತ್ಪನ್ನಗಳ ಖರೀದಿ ಸೇರಿದಂತೆ ವಿವಿಧ ಸಂಘಟನೆಗಳು ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಸರಣಿ ಪ್ರತಿಭಟನೆಗಳು ನಡೆಸಿದವು. ಭಾರಿ ಪೊಲೀಸ್ ಭದ್ರತೆಯಲ್ಲಿ ನಡೆದ ಅಧಿವೇಶನ ಕಲಾಪದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು ಸೇರಿದಂತೆ ರಾಜ್ಯದ ಜ್ವಲಂತ ವಿಚಾರಗಳು ಚರ್ಚಿಸಲಾಯಿತು. ಅಧಿವೇಶನಕ್ಕೆ ಆಗಮಿಸಿದ್ದ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸುತ್ತಮುತ್ತಲಿನ ಪ್ರವಾಸಿ ಮತ್ತು ಯಾತ್ರಾಸ್ಥಳ ಗಳಿಗೆ ಭೇಟಿ ನೀಡಿದ್ದು ನಡೆಯಿತು.

ಡಿಸೆಂಬರ್ 8ರಂದು ಆರಂಭವಾದ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಡಿ.19ಕ್ಕೆ ಮುಕ್ತಾಯಕಂಡಿದ್ದು, ಹತ್ತು ದಿನಗಳ ಅಧಿವೇಶನದಲ್ಲಿ ಎರಡು ದಿನ ಹಾಲಿ ಸದಸ್ಯರಾಗಿದ್ದ ಎಚ್.ವೈ.ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ಸೇರಿದಂತೆ ಇತ್ತೀಚೆಗೆ ನಿಧನರಾಗಿದ್ದ ಗಣ್ಯರಿಗೆ ಸಂತಾಪ ಸಲ್ಲಿಕೆಗೆ ಸೀಮಿತವಾಯಿತು. ಉಳಿದ 8 ದಿನಗಳಲ್ಲಿ ಶಾಸಕರು ತಮ್ಮ-ತಮ್ಮ ಕ್ಷೇತ್ರಗಳು ಸೇರಿದಂತೆ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಪ್ರಶ್ನೋತ್ತರ, ವಿವಿಧ ನಿಯಮಗಳಲ್ಲಿ ವಿಷಯ ಪ್ರಸ್ತಾಪಿಸಿ ಸರಕಾರದಿಂದ ಉತ್ತರ ಪಡೆದರು.

ಉತ್ತರ ಕರ್ನಾಟಕ ಭಾಗದ ನೀರಾವರಿ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳು ಕಲಾಪದಲ್ಲಿ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ಪ್ರಸ್ತಾಪವಾಗಿ ಸದಸ್ಯರು ತೀವ್ರ ಅಸಮಾಧಾನ ಹೊರಹಾಕಿದರು.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ನೀಡದಿದ್ದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಕಲಾಪದಲ್ಲಿ ಕಾವೇರಿದ ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತಲ್ಲದೆ, ತಾವು ನೀಡಿದ್ದ ಉತ್ತರಕ್ಕಾಗಿ ಕ್ಷಮೆ ಕೇಳಿದ ಪ್ರಸಂಗವು ಗಮನ ಸೆಳೆಯಿತು.

ಗದ್ದಲದ ಮಧ್ಯೆ ‘ದ್ವೇಷ ಭಾಷಣ’ ನಿಯಂತ್ರಣ ವಿಧೇಯಕಕ್ಕೆ ಅಸ್ತು: ಪ್ರತಿಪಕ್ಷ ಬಿಜೆಪಿ ಸದಸ್ಯರ ತೀವ್ರ ವಿರೋಧದ ಮಧ್ಯೆ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಸೇರಿದಂತೆ ಕರ್ನಾಟಕ ಸಾಮಾಜಿಕ ಬಹಿಷ್ಕಾರ(ಪ್ರತಿಬಂಧ, ನಿಷೇಧ ಮತ್ತು ಪರಿಹಾರ)ವಿಧೇಯಕ, ಪರಿಶಿಷ್ಟ ಜಾತಿ ಒಳಮೀಸಲಾತಿ ವಿಧೇಯಕ, ಪೂರಕ ಅಂದಾಜುಗಳು, ಧನವಿನಿಯೋಗ ಸೇರಿದಂತೆ ಹಲವು ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಒಪ್ಪಿಗೆ ನೀಡಲಾಯಿತು.

ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯ ವರೆಗೆ ಅಧಿವೇಶನವನ್ನ ನಡೆಸಲಾಯಿತು. ಪ್ರತಿವರ್ಷ ಚಳಿಗಾಲದ ಅಧಿವೇಶನ ನಡೆದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಪರಿಹಾರ ದೊರೆತ್ತಿಲ್ಲ ಎಂಬ ಜನಸಾಮಾನ್ಯರ ಕೂಗು ಹಾಗೆಯೇ ಉಳಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಶಾಸಕರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ ಬಣದ ಶಾಸಕರು ಸದನ ಹೊರಗೆ ಔತಣಕೂಟಗಳ ನೆಪದಲ್ಲಿ ಒಂದೆಡೆ ಸೇರಿದ್ದು, ನಾಯಕತ್ವ ಬದಲಾವಣೆ ಸಂಬಂಧ ಸಮಾಲೋಚನೆ ನಡೆಸಿದ್ದು, ಗಮನ ಸೆಳೆಯಿತು.

ನಾಲ್ಕೈದು ತಿಂಗಳಿಂದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ‘ಮುಖ್ಯಮಂತ್ರಿ ಬದಲಾವಣೆ’ ಸುತ್ತ ನಡೆಯುತ್ತಿದ್ದ ಚರ್ಚೆ, ಪರ-ವಿರೋಧ ಅಭಿಪ್ರಾಯಗಳ ಮಂಡನೆಗೆ ವಿಧಾನ ಮಂಡಲ ಅಧಿವೇಶನ ಕಲಾಪವು ವೇದಿಕೆಯಾಯಿತು. ಒಟ್ಟಾರೆ ಬೆಳಗಾವಿ ಅಧಿವೇಶನವೂ ಮುಖ್ಯಮಂತ್ರಿ ಕುರ್ಚಿಗಾಗಿನ ಪೈಪೋಟಿ, ರಾಜಕೀಯ ಮೇಲಾಟಗಳು ನಡೆದರೂ ವಾರ್ಷಿಕ ಸಂಪ್ರದಾಯದಂತೆ ಹತ್ತು ದಿನಗಳ ಚಳಿಗಾಲದ ಅಧಿವೇಶನ ಕಲಾಪವು ಯಾವುದೇ ಗೊಂದಲಗಳಿಲ್ಲದೆ ಮುಕ್ತಾಯಕಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರಕಾಶ್ ಸಿ. ರಾಮಜೋಗಿಹಳ್ಳಿ

contributor

Similar News