ಬೆಳಗಾವಿ, ಹುಬ್ಬಳ್ಳಿಯಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆಗೆ ಸರಕಾರದ ಅನುಮೋದನೆ
ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಕರ್ನಾಟಕದ ತಂತ್ರಜ್ಞಾನ ಬೆಳವಣಿಗೆಯನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸುವ ಉದ್ದೇಶದೊಂದಿಗೆ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಸಂಬಂಧ ಪ್ರಕಟನೆ ಹೊರಡಿಸಿರುವ ಅವರು, ಸ್ಥಳೀಯ ಆರ್ಥಿಕತೆಯನ್ನು ವೇಗಗೊಳಿಸುವ ಸ್ಥಳೀಯ ಆರ್ಥಿಕತೆಯ ವೇಗವರ್ಧಕ ಕಾರ್ಯಕ್ರಮ ಅಡಿಯಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಬೆಂಗಳೂರಿನಿಂದ ಹೊರಗೆ ತಂತ್ರಜ್ಞಾನ ಪ್ರತಿಭೆ, ನವೋದ್ಯಮಗಳು ಹಾಗೂ ಉದ್ಯಮಶೀಲತೆಗೆ ಅಗತ್ಯವಾದ ಮೂಲಸೌಕರ್ಯ ಮತ್ತು ಅವಕಾಶಗಳನ್ನು ಸ್ಥಳೀಯವಾಗಿಯೇ ಒದಗಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.
2025-26ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಕಿಯೊನಿಕ್ಸ್ ಮೂಲಕ ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಈಗ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸುಮಾರು 10,000 ಚದರ ಅಡಿ ವಿಸ್ತೀರ್ಣದಲ್ಲಿ 82.80 ಲಕ್ಷ ರೂ. ವೆಚ್ಚದೊಂದಿಗೆ ಕೇಂದ್ರ ಸ್ಥಾಪಿಸಲು ಸರಕಾರ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಹುಬ್ಬಳ್ಳಿಯ ಐಟಿ ಪಾರ್ಕ್‍ನಲ್ಲಿ ಸುಮಾರು 10,000 ಚದರ ಅಡಿ ವಿಸ್ತೀರ್ಣದಲ್ಲಿ ಬಾಡಿಗೆ ರಹಿತ ಸ್ಥಳದಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪಿಸಲು ಸರಕಾರ ಅನುಮೋದನೆ ನೀಡಿದೆ. ಮೂರು ವರ್ಷಗಳ ಅವಧಿಗೆ ಒಟ್ಟು 5.80 ಕೋಟಿ ರೂ. ವೆಚ್ಚವಾಗಲಿದ್ದು, ಇದರಲ್ಲಿ 4.90 ಕೋಟಿ ರೂ. ಬಂಡವಾಳ ವೆಚ್ಚ ಮತ್ತು 0.90 ಕೋಟಿ ರೂ. ನಿರ್ವಹಣಾ ವೆಚ್ಚ ಸೇರಿದೆ ಎಂದು ಅವರು ವಿವರಿಸಿದ್ದಾರೆ.
ಸ್ಥಳೀಯ ಪ್ರತಿಭೆಯನ್ನು ಸ್ಥಳೀಯವಾಗಿಯೇ ಬೆಳೆಸುವುದು, ತಂತ್ರಜ್ಞಾನ ಉದ್ಯಮಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರಕಾರದ ಪ್ರಮುಖ ಉದ್ದೇಶವಾಗಿದೆ. ಬೆಳಗಾವಿ ಮತ್ತು ಹುಬ್ಬಳ್ಳಿಯ ಜಿಟಿಸಿಗಳು ಈ ದಿಕ್ಕಿನಲ್ಲಿ ಮಹತ್ವದ ವೇದಿಕೆಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಆರ್ಥಿಕ ಬಲವರ್ಧನೆ ಕಾರ್ಯಕ್ರಮ(ಲೀಪ್) ಕಾರ್ಯಕ್ರಮದಡಿ ಐದು ವರ್ಷಗಳ ಅವಧಿಗೆ ಒಂದು ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಮೊದಲ ವರ್ಷ 200 ಕೋಟಿ ರೂ. ವೆಚ್ಚ ಮಾಡಲು ಸರಕಾರ ಅನುಮೋದಿಸಿದೆ. ಇದರಡಿ ನವೋದ್ಯಮ ಹಾಗೂ ವೇಗವರ್ಧಕ ಕೇಂದ್ರಗಳ ಸೃಷ್ಟಿಗೂ ಆದ್ಯತೆ ನೀಡಲಾಗಿದೆ.
- ಪ್ರಿಯಾಂಕ್ ಖರ್ಗೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಗೃಹ ಸಚಿವ