"ಅಡ್ಡಮತದಾನದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯಬೇಡಿ": ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅಸಮಾಧಾನ
"ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಈ ಘೋಷಣೆ ನನಗೆ ನಿಜಕ್ಕೂ ದಿಗ್ಭ್ರಮೆ ಉಂಟು ಮಾಡಿದೆ"
ಸುರೇಶ್ ಕುಮಾರ್ / ಬಿ.ವೈ. ವಿಜಯೇಂದ್ರ
ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಶೀಘ್ರದಲ್ಲೇ ಧರ್ಮಸ್ಥಳದಲ್ಲಿ ಕರೆಯಲು ನಿರ್ಧರಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿರುವುದಕ್ಕೆ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿನ ಪೋಸ್ಟ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಈ ಘೋಷಣೆ ನನಗೆ ನಿಜಕ್ಕೂ ದಿಗ್ಭ್ರಮೆ ಉಂಟು ಮಾಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಅದರದೇ ಆದ ಪಾವಿತ್ರ್ಯತೆ ಹೊಂದಿದೆ. ನಾನು ವಿಧಾನಸಭೆಯಲ್ಲಿ ಹೇಳಿದಂತೆ, ನನ್ನ ಜೀವನದಲ್ಲಿ ನನ್ನ ತಾಯಿಯ ನಂತರ ನನಗಿರುವ ನಿಜವಾದ ಬಂಧು ಎಂದರೆ ಮಂಜುನಾಥ ಸ್ವಾಮಿ. ರಾಜಕಾರಣದಲ್ಲಿ ನಡೆದುಬಿಟ್ಟಿರುವ ಕೀಳುಮಟ್ಟದ ಅಡ್ಡಮತದಾನದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯುವುದು ದಯವಿಟ್ಟು ಬೇಡ’ ಎಂದು ಹೇಳಿದ್ದಾರೆ.
‘ಈ ಅಪಚಾರ ಮಾಡಿರುವವರು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಪಾಪ ಮಾಡಿದ್ದಾರೆ’ ಎಂದೂ ಅವರು ಹೇಳಿದ್ದಾರೆ.
‘ಈಗಾಗಲೇ ಹಲವರು ಧರ್ಮಸ್ಥಳದ ಹಿರಿಮೆಯನ್ನು ಹಾಳು ಮಾಡುವ ಕೆಲಸವನ್ನು ಮಾಡುವುದರಲ್ಲಿ ವಿಕೃತಾನಂದ ಪಡೆದಿದ್ದಾರೆ. ಇಡೀ ನಾಡಿನ ಜನತೆ ನಂಬಿಕೆ ಇಟ್ಟಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ, ಒಂದೊಮ್ಮೆ ಅಡ್ಡಮತದಾನ ಮಾಡಿದ ವೀರರು ಆಣೆ–ಪ್ರಮಾಣ ಮಾಡಿ ತಾವು ಉಳಿದುಕೊಳ್ಳಲು ತಮ್ಮ ನೈತಿಕ ದಿವಾಳಿತನ ತೋರಿಸಿದರೆ, ಅದರಿಂದ ಅಪಚಾರದ ಪ್ರಮಾಣ ಹೆಚ್ಚಾಗುತ್ತದಷ್ಟೇ’ ಎಂದು ಅವರು ಹೇಳಿದ್ದಾರೆ.
‘ದಯವಿಟ್ಟು ಸ್ವಾಮಿ ಮಂಜುನಾಥನ ಶ್ರೇಷ್ಠತೆಯನ್ನು ಈ ರೀತಿ ಓರೆ ಹಚ್ಚುವುದು ಯಾವುದೇ ಕಾರಣಕ್ಕೂ ಬೇಡ’ ಎಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ವಿಧಾನಪರಿಷತ್ ಚುನಾವಣೆಯ ಅಡ್ಡಮತದಾನದ ಆರೋಪದ ವಿಚಾರದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಧರ್ಮಸ್ಥಳದಲ್ಲಿ ನಡೆಸುವ ಕುರಿತು ಬಿ.ವೈ. ವಿಜಯೇಂದ್ರ ಘೋಷಣೆ ಮಾಡಿದ ಬೆನ್ನಲ್ಲೇ ಸುರೇಶ್ ಕುಮಾರ್ ಈ ಪ್ರತಿಕ್ರಿಯೆ ನೀಡಿದ್ದು, ವಿಷಯವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.