ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಕ್ಯಾತೆ ಸರಿಯಲ್ಲ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (File Photo)
ಮಂಡ್ಯ: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಕ್ಯಾತೆ ಸರಿಯಲ್ಲ. ಈ ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಾಗಲಿದೆ. ಇಂತಹ ವಿಚಾರದಲ್ಲಿ ರಾಜಕೀಯ ಇರಬಾರದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ರವಿವಾರ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ನಂತರ, ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಡಿಪಿಆರ್ ಆಗಿದೆ. ಶೀಘ್ರದಲ್ಲೇ ಕೇಂದ್ರದ ಅನುಮೋದನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೀರಿನ ವಿಚಾರದಲ್ಲಿ ರಾಜ್ಯದ ಜತೆ ತಮಿಳುನಾಡಿನ ಕ್ಯಾತೆ ಇದೇ ಮೊದಲಲ್ಲ. ಕಳೆದ 50 ವರ್ಷದಿಂದ ಸಂಘರ್ಷ ಸೃಷ್ಟಿಸುತ್ತಲೇ ಇದೆ. ಉತ್ತಮ ಮಳೆಯಾದಾಗ ಎರಡು ಪಟ್ಟು ನೀರು ಹರಿದಿದೆ. ನಮ್ಮಲ್ಲಿ ನೀರು ಇಲ್ಲದಾಗ ತಮಿಳುನಾಡು ನೀರು ಕೇಳುವುದು ಎಷ್ಟು ಸರಿ? ಅವರು ಪ್ರಶ್ನಿಸಿದರು.
ನಮ್ಮ ಹಣದಿಂದ ನಮ್ಮ ರಾಜ್ಯದ ಅಣೆಕಟ್ಟೆಗಳನ್ನು ನಿರ್ಮಿಸಿದ್ದೇವೆ. ಆದರೆ, ನೀರನ್ನು ಬೇರೆ ರಾಜ್ಯಗಳಿಗೆ ಬಿಡುವ ಡ್ಯಾಂಗಳಾಗಿಬಿಟ್ಟಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸರಿಯಲ್ಲ. ಇದರಲ್ಲಿ ಒಕ್ಕೂಟ ಸರಕಾರದ ವೈಫಲ್ಯದ ಜತೆಗೆ, ರಾಜ್ಯದ ವೈಫಲ್ಯವೂ ಇದೆ ಎಂದು ಅವರು ವಿಷಾದಿಸಿದರು.
ಪ್ರತಿಷ್ಠೆ ವಿಚಾರ ಬರುವುದಿಲ್ಲ:
ಬಿಡದಿ ಟೌನ್‍ಶಿಪ್ ವಿಚಾರವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ. ವೈಯಕ್ತಿಕ ನೆಲೆಗಟ್ಟಿನಲ್ಲಿ ನಾನು ಹೋರಾಟ ಮಾಡುತ್ತಿಲ್ಲ. ರೈತರ ಪರವಾಗಿ ದನಿ ಎತ್ತಬೇಕಾದುದು ನನ್ನ ಜವಾಬ್ಧಾರಿಯಾಗಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಟೌನ್‍ಶಿಪ್ ಯೋಜನೆಗೆ ನನ್ನ ವಿರೋಧವಿಲ್ಲ. ಕೃಷಿಗೆ ಯೋಗ್ಯವಲ್ಲದ ಬರಡು ಜಾಗದಲ್ಲಿ ಟೌನ್‍ಶಿಪ್ ಮಾಡಲಿ. ತೆಂಗು, ಅಡುಕೆ ಬೆಳೆಗಳಿಂದ ಕಂಗೊಳಿಸುತ್ತಿರುವ ಬಿಡದಿಯಲ್ಲಿ ಟೌನ್‍ಶಿಪ್ ಬೇಡ ಎನ್ನುವುದು ನನ್ನ ಹೋರಾಟ. ಡಿನೋಟಿಫಿಕೇಷನ್ ಅಗತ್ಯವಿಲ್ಲ, ಯೋಜನೆ ಕೈಬಿಟ್ಟಿದ್ದೇವೆ ಎಂದರೆ ಸಾಕು ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ರೆಡ್‍ಜೋನ್ ವಿಷಯ ಮುಂದೆ ತಂದು ಕಾಂಗ್ರೆಸ್‍ನವರು ಜನರ ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಅದರ ಬಗ್ಗೆ ಅವರ ಪಕ್ಷದ ಮಾಗಡಿ ಶಾಸಕರೇ ಸತ್ಯ ಹೇಳಿದ್ದಾರೆ. ಯೋಜನೆ ಹೆಸರಿನಲ್ಲಿ ರೈತರ ಭೂಮಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರ ಜಮೀನು ಲಪಟಾಯಿಸಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.
ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಿಂದ ತೊಂದರೆ ಆಗಿದೆ. ಪರೀಕ್ಷಾರ್ಥಿಗಳು ಆತಂಕಗೊಂಡಿದ್ದಾರೆ. ಈಗ ಮರುಪರೀಕ್ಷೆ ಸುಗಮವಾಗಿ ನಡೆಯಲು ಎಲ್ಲಾ ಕ್ರಮವಹಿಸಲಾಗಿದೆ. ಪರೀಕ್ಷಾರ್ಥಿಗಳು ಆತಂಕಗೊಳ್ಳದೆ ಪರೀಕ್ಷೆ ಬರೆಯಬೇಕು ಎಂದು ಅವರು ಸಲಹೆ ನೀಡಿದರು.
“ನೀರಾವರಿ ವಿಚಾರದಲ್ಲಿ ಒಕ್ಕೂಟ ಸರಕಾರಗಳಿಂದ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗಿದೆ. ನ್ಯಾಯಯುತವಾದ ಅನುದಾನ ದೊರೆಯಲಿಲ್ಲ. ಹಾಗಾಗಿ ರಾಜ್ಯ ಈ ವಿಚಾರದಲ್ಲ ಸಂಕಷ್ಟ ಎದುರಿಸುವಂತಾಯಿತು. ಇದರಲ್ಲಿ ಒಕ್ಕೂಟ ಸರಕಾರದ ವೈಫಲ್ಯದ ಜತೆಗೆ, ರಾಜ್ಯ ಸರಕಾರದ ವೈಫಲ್ಯವೂ ಇದೆ. ಆದರೆ, ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ರಾಜ್ಯಕ್ಕೆ ನ್ಯಾಯ ದೊರಕಿತು.”
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.