×
Ad

ಮೋದಿಯಿಂದ ದೇಶ ಹಾಳು, ಟ್ರಂಪ್‍ನಿಂದ ಪ್ರಪಂಚ ಹಾಳು: ಮಲ್ಲಿಕಾರ್ಜುನ ಖರ್ಗೆ ಟೀಕೆ

"ಬಿಜೆಪಿಯವರು ರಾಮನ ಹೆಸರಲ್ಲಿ ಕೋಟ್ಯಂತರ ರೂ.ಲೂಟಿ ಮಾಡುವವರು"

Update: 2026-06-21 20:09 IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಟ್ರಂಪ್ ಇಬ್ಬರೂ ಫ್ರೆಂಡ್, ಫ್ರೆಂಡ್ ಎಂದುಕೊಂಡು ನಮ್ಮ ವಿದೇಶಾಂಗ ನೀತಿಯನ್ನೇ ಹದಗೆಡಿಸಿಬಿಟ್ಟರು. ಮೋದಿ ದೇಶ ಹಾಳು ಮಾಡುತ್ತಿದ್ದರೆ, ಅಮೆರಿಕದ ಟ್ರಂಪ್ ಇಡೀ ಪ್ರಪಂಚವನ್ನು ಹಾಳು ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪದಗ್ರಹಣ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿಯವರು ಕರ್ನಾಟಕ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ?. ಇಡೀ ದೇಶಕ್ಕೆ ಮೋದಿ ಕೊಟ್ಟಿದ್ದು ನಿರುದ್ಯೋಗ, ಬೆಲೆ ಏರಿಕೆ. ಮೋದಿಗೆ ದೊಡ್ಡ ಸಂಕಟವೊಂದು ಬರುತ್ತದೆ ಕಾದು ನೋಡಿ ಎಂದು ಎಚ್ಚರಿಸಿದರು.

ರಾಮನ ಹೆಸರಲ್ಲಿ ಕೋಟ್ಯಂತರ ರೂ.ಲೂಟಿ ಮಾಡುವವರು ಬಿಜೆಪಿಯವರು. ಈ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರಥಯಾತ್ರೆ ಮಾಡಿದವರು ಅಡ್ವಾಣಿ. ಆಗ ಜನರೆಲ್ಲ ಇಟ್ಟಿಗೆ, ದುಡ್ಡು, ಬಂಗಾರ ಕೊಟ್ಟರು. ಅದಕ್ಕೆಲ್ಲ ಲೆಕ್ಕವೇ ಇಲ್ಲ. ಅಲ್ಲಿನ ಹುಂಡಿ ದುಡ್ಡನ್ನು ಮೋದಿ ಶಿಷ್ಯರು ಲೂಟಿ ಮಾಡುತ್ತಿದ್ದಾರೋ, ಮತ್ಯಾರು ಹೊಡೆಯುತ್ತಿದ್ದಾರೋ ತನಿಖೆ ಆಗಬೇಕು. ಧರ್ಮದ ಹೆಸರಲ್ಲಿ ದೇಶದಲ್ಲಿ ಲೂಟಿ ಆಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದರು.

ನೀಟ್ ಪರೀಕ್ಷೆ ಏಕೆ ಎರಡನೇ ಬಾರಿ ನಡೆಯಿತು? ಶಿಕ್ಷಣ ಸಚಿವ ರಾಜೀನಾಮೆ ಕೊಡಬೇಕು. ಎಲ್ಲರಿಗೆ ಅನುಕೂಲ ಆಗಲೆಂದು ನೀಟ್ ಬಂತು. ಇವರಿಗೆ ಪರೀಕ್ಷೆ ನಡೆಸಲು ಆಗುವುದಿಲ್ಲ. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಮೋಸ ಮಾಡಿದವರು ಯಾರು? ಸಿಇಟಿ ಮಾದರಿಯಲ್ಲೇ ಎಲ್ಲ ರಾಜ್ಯಗಳಲ್ಲೂ ನೀಟ್ ಪರೀಕ್ಷೆ ಆಗಲಿ. ರಾಜ್ಯಗಳಿಗೇ ಪರೀಕ್ಷೆ ಅಧಿಕಾರ ಕೊಡಿ. ಪಿಯುಸಿ ಹಾಗೂ ಸಿಇಟಿ ಮಾದರಿ ರ್ಯಾಂಕ್ ನೀಡಿದರೆ ಯಾರಿಗೂ ಅನ್ಯಾಯ ಆಗಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ವ್ಯಕ್ತಿ ಪೂಜೆಗೆ ಅವಕಾಶವಿಲ್ಲ: ಕಾಂಗ್ರೆಸ್ ಪಕ್ಷ ಶಿಸ್ತಿಗೆ ಹೆಸರಾಗಿದೆ. ಇಲ್ಲಿ ಯಾವುದೇ ಕಾರಣಕ್ಕೂ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಪಕ್ಷದ ಪೂಜೆಗೆ ಅವಕಾಶ. ಯಾರು ಎಷ್ಟೇ ದೊಡ್ಡವರಿದ್ದರೂ ಪಕ್ಷವೇ ದೊಡ್ಡದು. ಯಾವುದೇ ಕಾರಣಕ್ಕೂ ಶಿಸ್ತನ್ನು ಮರೆಯಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನನ್ನ 58 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ನಾಯಕರು ಬೆಳೆದಿದ್ದಾರೆಯೇ ಹೊರತು, ಅವರಿಂದ ಕಾಂಗ್ರೆಸ್ ಪಕ್ಷವಲ್ಲ. ನಾವೆಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಕಟ್ಟಬೇಕು ಎಂದು ಕರೆ ಕೊಟ್ಟರು.

ಸಿದ್ಧಾಂತ ಪಾಲಿಸುವವರ ಕೈಯಲ್ಲೇ ಕೆಪಿಸಿಸಿ ಚುಕ್ಕಾಣಿ: ಪಕ್ಷವನ್ನು ತಳಮಟ್ಟದಿಂದ ಕಟ್ಟಿರುವ, ಕಾರ್ಯಕರ್ತರನ್ನು ಗುರುತಿಸುವಂತಹ, ಪಕ್ಷದ ಸಿದ್ಧಾಂತ ಪಾಲಿಸುವ ವ್ಯಕ್ತಿಯ ಕೈಯಲ್ಲಿಯೇ ಪಕ್ಷದ ಜವಾಬ್ದಾರಿ ನೀಡಬೇಕು ಎಂದು ನಾವೆಲ್ಲರೂ ತೀರ್ಮಾನ ಮಾಡಿ ಕೊನೆಗೆ ಹರಿಪ್ರಸಾದ್ ಅವರಿಗೆ ಈ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಹರಿಪ್ರಸಾದ್ ಒಂದು ವರ್ಗಕ್ಕೆ ಸೀಮಿತವಾದ ನಾಯಕರಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತಾರೆ. ಅವರ ನೇತೃತ್ವದಲ್ಲಿ ಚುನಾವಣೆಗಳನ್ನು ಎದುರಿಸೋಣ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಇದೇ ವೇಳೆ ಮಾತನಾಡಿದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಬಿಜೆಪಿಯವರಿಗೆ ಅಧಿಕಾರ ನೀಡಿದರೆ, ಗ್ಯಾರಂಟಿ ಕಿತ್ತು ಹಾಕುತ್ತಾರೆ . ನಾವು ಗ್ಯಾರಂಟಿ ರಕ್ಷಣೆ ಮಾಡುತ್ತೇವೆ. ಗ್ಯಾರಂಟಿ ಫಲಾನುಭವಿಗಳ ಮೇಲೆ ಬಿಜೆಪಿ ಹಲ್ಲೆ ಮಾಡುತ್ತಿದೆ. ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಕೇಂದ್ರ ಸರಕಾರ ಜನರಿಗೆ ಅನ್ಯಾಯ ಮಾಡುತ್ತಿದೆ. ಎಸ್‍ಐಆರ್ ಮಾಡಿ ಅಲ್ಪಸಂಖ್ಯಾತ, ಒಬಿಸಿ ಮತದಾರರ ಹಕ್ಕು ಕಿತ್ತುಕೊಳ್ಳುತ್ತಿದೆ. ನಾವು ಸಂವಿಧಾನ ಮಾತ್ರವಲ್ಲ, ರಾಜ್ಯದ ಜನರ ಹಿತ ನೀವು ಕಾಪಾಡಬೇಕಾಗಿದೆ ಎಂದು ಸುರ್ಜೇವಾಲ ತಿಳಿಸಿದರು.

ಡಿಕೆ ಹಾಗೂ ಬಿಕೆಗೆ ಖರ್ಗೆ ಕಿವಿಮಾತು: ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಪಕ್ಷದ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಇಬ್ಬರೂ ಒಂದಾಗಿ ನಡೆಯಿರಿ. ನಿಮ್ಮಲ್ಲಿ ಎμÉ್ಟೀ ಭಿನ್ನಾಭಿಪ್ರಾಯ ಬಂದರೂ ಒಳಗೆ ಕೂತು ಚರ್ಚೆ ಮಾಡಿ. ಅದನ್ನೆಲ್ಲ ಹೊರತಂದರೆ ಇಡೀ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಎಐಸಿಸಿಗೆ ಕೆಟ್ಟ ಹೆಸರು ತರಬೇಡಿ. ಇನ್ನು ಮುಂದೆ ಕಾರ್ಯಕರ್ತರಿಗೆ ಅಧಿಕಾರ ಕೊಡಿ. ನಿಜವಾದ ಕಾರ್ಯಕರ್ತರನ್ನು ಗುರುತಿಸಿ ಹುದ್ದೆ ನೀಡಿ’ ಎಂದು ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News