×
Ad

IPL ನಲ್ಲಿ ಬಾಂಗ್ಲಾ ಆಟಗಾರನ ಖರೀದಿಗೆ ಬಿಜೆಪಿ ಆಕ್ಷೇಪ | ಶಾರುಖ್ ಖಾನ್ ಬದಲು ಅಮಿತ್ ಶಾರನ್ನು ಕೇಳಿ ಎಂದ ಪ್ರಿಯಾಂಕ್ ಖರ್ಗೆ

‘ನಿಯಮಗಳೇ ಅವಕಾಶ ನೀಡಿವೆ’ ಎಂದು ಉಲ್ಲೇಖಿಸಿದ ಸಚಿವರು

Update: 2026-01-02 16:15 IST

ಸಚಿವ ಪ್ರಿಯಾಂಕ್ ಖರ್ಗೆ (Photo: PTI)

ಬೆಂಗಳೂರು, ಜ.2: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಫ್ರಾಂಚೈಸಿಯೊಂದು ಬಾಂಗ್ಲಾದೇಶಿ ಆಟಗಾರನನ್ನು ಖರೀದಿಸಿರುವುದಕ್ಕೆ ಸಂಬಂಧಿಸಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ನಡೆಸುತ್ತಿರುವ ಟೀಕೆಯನ್ನು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಈ ವಿಚಾರದಲ್ಲಿ ಶಾರುಖ್ ಅಥವಾ ಫ್ರಾಂಚೈಸಿಗಳನ್ನು ಗುರಿಯಾಗಿಸುವ ಬದಲು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ರೀತಿಯ ವ್ಯವಸ್ಥೆಗೆ ಏಕೆ ಅವಕಾಶ ನೀಡಿವೆ ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರಶ್ನಿಸಬೇಕೆಂದು ಅವರು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಬಾಂಗ್ಲಾದೇಶಿ ಆಟಗಾರನನ್ನು ಸೇರಿಸಿಕೊಂಡಿರುವುದಕ್ಕೆ ಬಿಜೆಪಿ ಮತ್ತು ಸಂಘ ಪರಿವಾರವು ಆಕ್ರೋಶ ವ್ಯಕ್ತಪಡಿಸಿವೆ. ಇದನ್ನು ಟೀಕಿಸಿದ ಖರ್ಗೆ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ, “ವಿದೇಶಿ ಆಟಗಾರ ಐಪಿಎಲ್‌ನಲ್ಲಿ ಆಡುತ್ತಿದ್ದರೆ, ಅದು ಬಿಸಿಸಿಐ ಅಥವಾ ಐಪಿಎಲ್ ನಿಯಮಗಳು ಅವಕಾಶ ನೀಡಿರುವುದರಿಂದ” ಎಂದು ಸ್ಪಷ್ಟಪಡಿಸಿದ್ದಾರೆ.

ಶಾರುಖ್ ಖಾನ್ ಸಹ-ಮಾಲಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಕಳೆದ ವರ್ಷ ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ಐಪಿಎಲ್–2026ರ ಅವಧಿಗೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿಸಿತ್ತು.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯತೆ, ಕ್ರೀಡಾ ನಿಯಮಗಳು ಹಾಗೂ ರಾಜಕೀಯ ನಿಲುವುಗಳ ಕುರಿತಂತೆ ವ್ಯಾಪಕ ಚರ್ಚೆ ಆರಂಭವಾಗಿದೆ. ನೆರೆಯ ದೇಶದಲ್ಲಿ ಇತ್ತೀಚೆಗೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಬಾಂಗ್ಲಾದೇಶದ ಆಟಗಾರನೊಬ್ಬ ಭಾರತದಲ್ಲಿ ಆಡುವುದು ಸರಿಯಲ್ಲ ಎಂದು ಕೆಲವರು ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಹಿರಿಯ ಬಿಜೆಪಿ ನಾಯಕ ಸಂಗೀತ್ ಸೋಮ್, ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ ತಂಡದಲ್ಲಿ ಸೇರಿಸಿಕೊಂಡಿರುವುದಕ್ಕೆ ಶಾರುಖ್ ಖಾನ್ ಅವರನ್ನು “ದೇಶದಲ್ಲಿ ವಾಸಿಸುವ ಹಕ್ಕಿಲ್ಲದ ದೇಶದ್ರೋಹಿ” ಎಂದು ಕರೆದಿದ್ದಾರೆ. ಮುಸ್ತಾಫಿಜುರ್ ರೆಹಮಾನ್ ಭಾರತಕ್ಕೆ ಬಂದರೆ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಬರಲು ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಮೀರತ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋಮ್, “ಅಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ಆದರೆ ಶಾರುಖ್ ಖಾನ್ ತಮ್ಮ ಐಪಿಎಲ್ ತಂಡಕ್ಕಾಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿಸಿದ್ದಾರೆ. ಶಾರುಖ್ ಖಾನ್‌ ರಂತಹ ದೇಶದ್ರೋಹಿಗಳು ದೇಶದ ಜನರ ಕಾರಣದಿಂದಲೇ ತಾರೆಗಳಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ. ಶಾರುಖ್ ಖಾನ್ ಭಾರತವನ್ನು ತೊರೆಯಬೇಕು, ಅವರಿಗೆ ಇಲ್ಲಿ ವಾಸಿಸುವ ಯಾವುದೇ ‘ಹಕ್ಕು’ ಇಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಷಯದಲ್ಲಿ ಹಿಂದೂ ಆಧ್ಯಾತ್ಮಿಕ ನಾಯಕ ಜಗದ್ಗುರು ರಾಮಭದ್ರಾಚಾರ್ಯ ಕೂಡ ಶಾರುಖ್ ಖಾನ್ ಅವರನ್ನು ಟೀಕಿಸಿದ್ದಾರೆ.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಪಕ್ಷದ “ರಾಷ್ಟ್ರೀಯತೆ” ಅದರ ರಾಜಕೀಯ ಅನುಕೂಲತೆಗೆ ಅನುಗುಣವಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂದು ಆರೋಪಿಸಿದ್ದಾರೆ. ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಕ್ರಿಕೆಟ್ ಪರಸ್ಪರ ಅತಿಕ್ರಮಿಸಿದ್ದ ಹಿಂದಿನ ಹಲವು ಸಂದರ್ಭಗಳನ್ನು ಅವರು ಉಲ್ಲೇಖಿಸಿ, ಆಗ ಇಂತಹ ವಿವಾದಗಳು ಏಕೆ ಉದ್ಭವಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

“ಫ್ರಾಂಚೈಸಿಯನ್ನು ದೂಷಿಸುವ ಬದಲು, ಬಿಸಿಸಿಐ ಬಾಂಗ್ಲಾದೇಶದ ಆಟಗಾರರಿಗೆ ಐಪಿಎಲ್‌ನಲ್ಲಿ ಭಾಗವಹಿಸಲು ಏಕೆ ಅವಕಾಶ ನೀಡುತ್ತಿದೆ ಎಂದು ಬಿಜೆಪಿ ನಾಯಕರು ಪ್ರಶ್ನಿಸಬೇಕಿತ್ತು. ಅಗತ್ಯವಿದ್ದರೆ ಅದನ್ನು ನಿಷೇಧಿಸಬೇಕಾಗಿತ್ತು. ಆದರೆ ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಿದಾಗ ಇದೇ ನಾಯಕರಿಗೆ ಯಾವುದೇ ಆಕ್ಷೇಪ ಇರಲಿಲ್ಲ. ಕೋವಿಡ್ ಕಾಲದಲ್ಲಿ ಐಪಿಎಲ್ ಪಂದ್ಯಗಳನ್ನು ಇಸ್ಲಾಮಿಕ್ ದೇಶಗಳಿಗೆ ಸ್ಥಳಾಂತರಿಸಲಾಯಿತು. ಐಪಿಎಲ್ ಹರಾಜುಗಳೂ ಇಸ್ಲಾಮಿಕ್ ದೇಶಗಳಲ್ಲಿ ನಡೆದಿವೆ,” ಎಂದು ಖರ್ಗೆ ಹೇಳಿದ್ದಾರೆ.

ಫ್ರಾಂಚೈಸಿಗಳನ್ನು ಗುರಿಯಾಗಿಸುವುದಕ್ಕಿಂತ, ಐಸಿಸಿ ಮತ್ತು ಬಿಸಿಸಿಐ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲು ಏಕೆ ಅವಕಾಶ ನೀಡಲಾಗುತ್ತಿದೆ ಎಂಬ ಕುರಿತು ಕೇಂದ್ರ ಗೃಹ ಸಚಿವರಿಗೆ ಬಿಜೆಪಿ ನಾಯಕರು ಕಠಿಣ ಪ್ರಶ್ನೆಗಳನ್ನು ಕೇಳಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News