ದಿಲ್ಲಿಯಲ್ಲಿ ವರಿಷ್ಠರ ಭೇಟಿ ಸಾಧ್ಯವಾಗದೆ ರಾಜ್ಯಕ್ಕೆ ವಾಪಸ್ ಆದ ಯತ್ನಾಳ್ ಬಣ
ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಬಹಿರಂಗ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಭಿನ್ನರಿಗೆ ಹೊಸದಿಲ್ಲಿಯಲ್ಲಿ ವರಿಷ್ಠರ ಭೇಟಿ ಸಾಧ್ಯವಾಗಿಲ್ಲ. ಹೀಗಾಗಿ ಯತ್ನಾಳ್ ಮತ್ತವರ ತಂಡ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಬರಿಗೈಯಲ್ಲಿ ರಾಜ್ಯಕ್ಕೆ ವಾಪಸ್ ಆಗಿದೆ.
ಯತ್ನಾಳ್ ನೇತೃತ್ವದ ತಂಡಕ್ಕೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಯಾರೊಬ್ಬರ ಭೇಟಿಯೂ ಸಾಧ್ಯವಾಗಿಲ್ಲ. ಹೀಗಾಗಿ ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದ ವರೆಗೆ ಸತತ 24 ಗಂಟೆಗಳು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದ ಯತ್ನಾಳ್ ತಂಡ ತೀವ್ರ ನಿರಾಸೆಯಿಂದ ರಾಜ್ಯಕ್ಕೆ ಮರಳಿದೆ.
ಆಡಳಿತ ಪಕ್ಷದ ಜತೆ ಹೊಂದಾಣಿಕೆ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದಲ್ಲಿ ತೊಡಗಿರುವ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಜತೆಗೆ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ಬೇಡಿಕೆಯನ್ನೂ ಹೈಕಮಾಂಡ್ ಮುಂದೆ ಮಂಡಿಸಲು ಯತ್ನಾಳ್ ತಂಡ ಮುಂದಾಗಿತ್ತು. ಆದರೆ, ಇವರಿಗೆ ವರಿಷ್ಠರ ಭೇಟಿಯೇ ಸಾಧ್ಯವಾಗಿಲ್ಲ.
ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದಶಿ ಬಿ.ಎಲ್.ಸಂತೋಷ್ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರನ್ನಷ್ಟೇ ಯತ್ನಾಳ್ ತಂಡ, ಭೇಟಿ ಮಾಡಿ ಸಮಾಲೋಚನೆ ನಡೆಸಿತ್ತು. ಫೆ.10ರ ಬಳಿಕ ಮತ್ತೊಮ್ಮೆ ಹೊಸದಿಲ್ಲಿಗೆ ತೆರಳಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುವುದಾಗಿ ಭಿನ್ನಮತೀಯರು ಹೇಳಿಕೊಂಡಿದ್ದಾರೆ.
ಆದರೆ, ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿಳುವ ಸಾಧ್ಯತೆ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರ ರಚನೆ ಆಗುವವರೆಗೂ ಕರ್ನಾಟಕ ರಾಜ್ಯವು ಸೇರಿದಂತೆ ಬೇರೆ ಯಾವುದೇ ರಾಜ್ಯದ ಬೆಳವಣಿಗೆಗಳ ಬಗ್ಗೆ ಬಿಜೆಪಿಯ ಹೈಕಮಾಂಡ್ ನಾಯಕರು ತಲೆಕೆಡಿಸಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆದುದರಿಂದ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದ್ದ ಭಿನ್ನಮತೀಯರು ಇದೀಗ ತಮ್ಮ ಸ್ವಕ್ಷೇತ್ರಗಳಿಗೆ ಹಿಂತಿರುಗಿದ್ದಾರೆ. ಯತ್ನಾಳ್ ಹೈದರಾಬಾದ್ ಮೂಲಕ ವಿಜಯಪುರಕ್ಕೆ ವಾಪಸ್ ಆಗಿದ್ದರೆ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಉತ್ತರ ಪ್ರದೇಶದ ಪ್ರಯಾಗ್ ರಾಜ್‍ಗೆ ತೆರಳಿದ್ದಾರೆ. ರಮೇಶ್ ಜಾರಕಿಹೊಳಿ, ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಇನ್ನಿತರರು ರಾಜ್ಯಕ್ಕೆ ಹಿಂದಿರುಗಿದ್ದಾರೆ.
ಸೋಮಣ್ಣ ನಿವಾಸದಲ್ಲಿ ಸಭೆ: ಫೆ.10ರಂದು ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದೇ ವೇಳೆ ಭಿನ್ನಮತೀಯರು ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಈ ಬೆಳವಣಿಗೆಗಳ ನಡುವೆಯೇ ಬಿಜೆಪಿ ‘ತಟಸ್ಥ ಬಣ’ದಲ್ಲಿ ಗುರುತಿಸಿಕೊಂಡಿರುವ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಸಂಸದ ಬಸವರಾಜ ಬೊಮ್ಮಾಯಿ, ಅರವಿಂದ್ ಬೆಲ್ಲದ್, ಸಿ.ಟಿ.ರವಿ, ವಿ.ಸುನಿಲ್ ಕುಮಾರ್, ಡಿ.ವಿ.ಸದಾನಂದಗೌಡ ಸೇರಿದಂತೆ ಇನ್ನಿತರರು ತೆರೆಮರೆಯಲ್ಲೇ ರಾಜ್ಯಾಧ್ಯಕ್ಷರ ಬದಲಾವಣೆಗೆ ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28