ಸ್ವಾಯತ್ತ ಸಂಸ್ಥೆಗಳು ಕರ್ತವ್ಯ ಮರೆತರೆ ಸರ್ವಾಧಿಕಾರಕ್ಕಿಂತಲೂ ಅಪಾಯಕಾರಿ : ಬಿ.ಕೆ.ಹರಿಪ್ರಸಾದ್
ಬೆಂಗಳೂರು : ನಾಗರಿಕರ ಮತಗಳನ್ನು ರಕ್ಷಿಸಬೇಕಾದ ಸ್ವಾಯತ್ತ ಸಂಸ್ಥೆಗಳು ತಮ್ಮ ಅನುಕೂಲಗಳಿಗಾಗಿ ಕರ್ತವ್ಯ ಮರೆತರೆ ಅದು ಸರ್ವಾಧಿಕಾರಕ್ಕಿಂತಲೂ ಅಪಾಯಕಾರಿ. ಜೊತೆಗೆ ಇದನ್ನು ದೇಶದ್ರೋಹ ಎನ್ನಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನಿನ ಮುದ್ರೆಯ ಹಿಂದೆ ಅಡಗಿಕೊಂಡು ದೇಶವನ್ನೇ ಹಾಳು ಮಾಡುತ್ತವೆ ಎಂದು ಹಿರಿಯ ನ್ಯಾಯವಾದಿಗಳಾಗಿದ್ದ ನಾರಿ ಫಾಲ್ಕಿ ಅವರು ಹೇಳಿದ್ದರು. ಈ ಮಾತುಗಳನ್ನು ಕೇಳಿದರೆ ಬಿಜೆಪಿಯವರಿಗೆ ಕಸಿವಿಸಿಯಾಗಬಹುದು ಎಂದು ತಿಳಿಸಿದರು.
ತ್ರಿವರ್ಣ ಧ್ವಜ, ರಾಷ್ಟ್ರಗೀತೆಯ ವಿರುದ್ಧ ಇರುವವರು ರಾಷ್ಟ್ರದ್ರೋಹಿಗಳು ಎಂದು ಇಂದು, ನಾಳೆ ಎಂದಿಗೂ ಹೇಳುತ್ತೇವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಅವರಿಗೆ ಕುಮ್ಮಕ್ಕು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರೆಲ್ಲರೂ ರಾಷ್ಟ್ರದ್ರೋಹಿಗಳು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಕೇರಳದ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಕೀಳುಮಟ್ಟದ ವಾಗ್ದಾಳಿ ಮಾಡಿದ್ದಾರೆ. ಅಲ್ಲದೇ, ರಾಹುಲ್ ಗಾಂಧಿ ಕ್ಷಮಾಪಣೆ ಕೇಳಬೇಕು ಎಂದಿದ್ದಾರೆ. ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಜಿಜಿ ಥಾಮ್ಸನ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲು ಜ್ಞಾನೇಶ್ ಕುಮಾರ್ ಆಮಿಷವೊಡ್ಡಿದ್ದರು ಎಂದು ಆರೋಪ ಮಾಡಿದ್ದಾರೆ. ಇದು ಸಣ್ಣ ವಿಚಾರವೇ ಅಲ್ಲ ಎಂದು ಹರಿಪ್ರಸಾದ್ ಹೇಳಿದರು.
ಜ್ಞಾನೇಶ್ ಕುಮಾರ್ ಅವರು ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡಿದ್ದಾರೆ. 10 ತಿಂಗಳಲ್ಲಿ ಅವರ ವಿರುದ್ಧ ಬಂದ 14 ಆಕ್ಷೇಪಣೆಗಳಿಗೆ ಸರಿಯಾದ ಉತ್ತರ ನೀಡಿಲ್ಲ. ಜ್ಞಾನೇಶ್ ಕುಮಾರ್ ಅವರಿಗೆ ಧೈರ್ಯ ಇದ್ದರೆ ಸತ್ಯಾಂಶ ಮಂಡಿಸಲಿ. ಇವರಿಗೆ ಉತ್ತರಿಸುವ ಧೈರ್ಯವೇ ಇಲ್ಲ. ಕೂಗಾಟದಿಂದ, ಪ್ರಶ್ನೆಗೆ ಮರುಪ್ರಶ್ನೆ ಹಾಕುವುದರಿಂದ ಸತ್ಯವನ್ನ ಮರೆಮಾಚಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ರಾಜೀವ್ ಚಂದ್ರಶೇಖರ್ ಅವರ ಜಾತಕ ಬಿಡಿಸಿ ಹೇಳಬೇಕಿಲ್ಲ. ರಾಜ್ಯಸಭೆಗೆ ಆಯ್ಕೆಯಾಗುವಾಗ ನೀವು ಭ್ರಷ್ಟಾಚಾರದಲ್ಲಿ ಮುಳುಗಿದ್ದನ್ನು ಎಲ್ಲರೂ ನೋಡಿದ್ದಾರೆ. ನಾನೂ ಸಹ ರಾಜ್ಯಸಭೆ ಸದಸ್ಯನಾಗಿದ್ದವನು. ಶಾಸಕರಿಗೆ ಹಣದ ಆಮಿಷ ಒಡ್ಡಿದ ಹಿನ್ನೆಲೆ ನಿಮ್ಮದು. 2012 ರಲ್ಲಿಯೂ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ರಾಜ್ಯಸಭಾ ಸದಸ್ಯರಾಗಿದ್ದನ್ನು ಮರೆಯಬಾರದು ಎಂದು ಹರಿಪ್ರಸಾದ್ ಹೇಳಿದರು.
ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿಯ ಸದಸ್ಯರಾಗುವವರು ಆ ಕ್ಷೇತ್ರದಿಂದ ಲಾಭ ಪಡೆಯುವವರಾಗಿರಬಾರದು. ಆದರೆ ರಾಜೀವ್ ಚಂದ್ರಶೇಖರ್ ಸದಸ್ಯರಾಗಿದ್ದಾಗ ಅನೇಕ ಡೀಲ್ ಗಳನ್ನು ಮಾಡಿದ್ದಾರೆ. ಇದೆಲ್ಲವೂ ಶೀಘ್ರ ಹೊರಬರಲಿದೆ ಎಂದು ಹರಿಪ್ರಸಾದ್ ಎಚ್ಚರಿಸಿದರು.
ಕೇಂದ್ರ ಚುನಾವಣಾ ಆಯೋಗಕ್ಕೆ ವಕ್ತಾರರೇ ಇಲ್ಲ. ಆದುದರಿಂದ, ಬಿಜೆಪಿಯ ರವಿಪ್ರಸಾದ್ ಎಂಬುವರನ್ನು ನೇಮಕ ಮಾಡಲಾಗಿದೆ. ಜೊತೆಗೆ ಅನೇಕ ವಕ್ತಾರರನ್ನು ನೇಮಕ ಮಾಡಿ ಅನಧಿಕೃತವಾಗಿ ಚುನಾವಣಾ ಆಯೋಗವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಅವರು, ರಾಜೀವ್ ಚಂದ್ರಶೇಖರ್ ಅವರು ರಾಹುಲ್ ಗಾಂಧಿ ಅವರನ್ನು ಪ್ರಶ್ನೆ ಮಾಡುವ ಮೊದಲು ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳಲಿ. ಅವರ ಪ್ರಜಾಪ್ರಭುತ್ವ ವಿರೋಧಿ ನಡೆ ಬಗ್ಗೆ ತಿಳಿದುಕೊಳ್ಳಲಿ ಎಂದು ಆಗ್ರಹಿಸಿದರು.
ಬಿಜೆಪಿಯವರು ಬಿಹಾರ ಮಾದರಿ ಇಟ್ಟುಕೊಂಡು ಕರ್ನಾಟಕದಲ್ಲಿ ಗೆಲುವು ದಾಖಲಿಸುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.