86 ರೂ. ಔಷಧಿಗೆ 4,228 ರೂ. MRP; ಎಫ್ಡಿಎಯಿಂದ ಎನ್ಪಿಪಿಎಗೆ ಕ್ರಮಕ್ಕೆ ಮನವಿ
ಸಾಂದರ್ಭಿಕ ಚಿತ್ರ | Image by jcomp on Magnific
ಬೆಂಗಳೂರು : ಔಷಧಗಳ ಖರೀದಿ ದರಕ್ಕೂ ರೋಗಿಗಳಿಗೆ ವಿಧಿಸಲಾಗುತ್ತಿರುವ ಗರಿಷ್ಠ ಚಿಲ್ಲರೆ ದರ(ಎಂಆರ್‌ಪಿ)ಕ್ಕೂ ಭಾರಿ ವ್ಯತ್ಯಾಸವಿರುವುದು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (ಎಫ್‍ಡಿಎ) ಇಲಾಖೆಯ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ರಾಜ್ಯದ 254 ಔಷಧ ತಯಾರಿಕಾ ಕಂಪೆನಿಗಳ ಉತ್ಪನ್ನಗಳ ಬೆಲೆ ವಿವರಗಳನ್ನು ಸಂಗ್ರಹಿಸಿರುವ ಎಫ್‍ಡಿಎ, ಅತಿಯಾದ ದರ ನಿಗದಿಗೆ ಕಡಿವಾಣ ಹಾಕುವಂತೆ ರಾಷ್ಟ್ರೀಯ ಔಷಧೀಯ ಬೆಲೆ ನಿಯಂತ್ರಣ ಪ್ರಾಧಿಕಾರ(ಎನ್‍ಪಿಪಿಎ) ಹಾಗೂ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಗೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.
ಎಫ್‍ಡಿಎ ಪರಿಶೀಲನೆ ವೇಳೆ ಕೇವಲ 86ರೂ.ಗೆ ಖರೀದಿಸಲಾದ ಔಷಧಕ್ಕೆ 4,228 ರೂ. ಎಂಆರ್ ಪಿ ನಿಗದಿಪಡಿಸಿರುವುದು ಪತ್ತೆಯಾಗಿದೆ. ಮತ್ತೊಂದು 160ರೂ. ಮೌಲ್ಯದ ಔಷಧಕ್ಕೆ 7,110 ರೂ. ಎಂಆರ್ ಪಿ ನಿಗದಿಯಾಗಿರುವುದು ಬೆಳಕಿಗೆ ಬಂದಿದೆ. ಬೆಲೆ ನಿಯಂತ್ರಣದ ವ್ಯಾಪ್ತಿಯಿಂದ ಹೊರಗಿರುವ ಕೆಲವು ಔಷಧಗಳ ಮೇಲೆ ಅತಿಯಾದ ಮಾರ್ಜಿನ್ ವಿಧಿಸಲಾಗುತ್ತಿರುವ ಬಗ್ಗೆ ಪತ್ರದಲ್ಲಿ ಅಧಿಕಾರಿಗಳು ಗಮನ ಸೆಳೆದಿದ್ದಾರೆ ಎನ್ನಲಾಗಿದೆ.
ವಿಶೇಷವಾಗಿ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಜೀವರಕ್ಷಕ ಔಷಧಗಳಲ್ಲಿಯೇ ಖರೀದಿ ದರ ಮತ್ತು ಎಂಆರ್ ಪಿ ನಡುವೆ ದೊಡ್ಡ ಪ್ರಮಾಣದ ವ್ಯತ್ಯಾಸ ಕಂಡುಬಂದಿದೆ ಎಂದು ವರದಿಯಾಗಿದೆ. ಈ ದರ ವ್ಯತ್ಯಾಸದಿಂದ ಅಂತಿಮವಾಗಿ ಹೆಚ್ಚಿನ ಆರ್ಥಿಕ ಹೊರೆ ರೋಗಿಗಳ ಮೇಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಎಫ್‍ಡಿಎ ಆಯುಕ್ತ ಕೆ.ಶ್ರೀನಿವಾಸ್ ಔಷಧಿಗಳ(ಬೆಲೆ ನಿಯಂತ್ರಣ) ಆದೇಶ 2013ರ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರದ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಪತ್ರ ಬರೆದಿದ್ದು, ಹೆಚ್ಚಿನ ಬೆಲೆಯ ಜೀವರಕ್ಷಕ ಹಾಗೂ ಕ್ಯಾನ್ಸರ್ ಔಷಧಗಳ ಮೇಲೆ ಟ್ರೇಡ್ ಮಾರ್ಜಿನ್‍ಗೆ ಮಿತಿ ವಿಧಿಸಬೇಕು. ಔಷಧಗಳ ಬೆಲೆ ನಿಗದಿಯಲ್ಲಿ ಪಾರದರ್ಶಕತೆ ಹಾಗೂ ರೋಗಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಮಟ್ಟದಲ್ಲಿ ದರ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.