ಗ್ಯಾರಂಟಿ ಯೋಜನೆ ಇಲ್ಲದಿದ್ದರೆ ಆರ್ಥಿಕ ನಿರ್ವಹಣೆ ಸುಲಭ ಇತ್ತು : ಸಚಿವ ಎಚ್.ಸಿ.ಬಾಲಕೃಷ್ಣ
ಬೆಂಗಳೂರು : ‘ಗೃಹಲಕ್ಷ್ಮೀ ಸೇರಿದಂತೆ ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆ ಜಾರಿಗೆ ಬರದೆ ಇದ್ದಿದ್ದರೆ ಆರ್ಥಿಕ ನಿರ್ವಹಣೆ ಇನ್ನಷ್ಟು ಸುಲಭವಾಗುತ್ತಿತ್ತು’ ಎಂದು ನಗರಾಭಿವೃದ್ಧಿ ಸಚಿವ ಎಚ್.ಸಿ. ಬಾಲಕೃಷ್ಣ, ಗ್ಯಾರಂಟಿಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳು ಇಲ್ಲದಿದ್ದರೆ ಇವೆಲ್ಲವೂ ನಮಗೆ ಇಷ್ಟು ದೊಡ್ಡ ಸಮಸ್ಯೆಗಳಾಗಿ ಕಾಣುತ್ತಿರಲಿಲ್ಲ. ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದಿತ್ತು. ಆದರೆ ಸರಕಾರ ನಡೆಸಬೇಕಾಗಿದೆ. ವ್ಯವಸ್ಥೆ ಮತ್ತು ಬಜೆಟ್‍ನೊಳಗೆ ಎಲ್ಲವನ್ನೂ ನಿರ್ವಹಿಸಬೇಕಿದೆ ಎಂದು ಹೇಳಿದರು.
ಐದು ಗ್ಯಾರಂಟಿ ಯೋಜನೆಗಳನ್ನು ಜನರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಅರ್ಹ ಕುಟುಂಬಗಳಿಗೆ ನಿಗದಿತ ಮಿತಿಯವರೆಗೆ ಉಚಿತ ವಿದ್ಯುತ್, ಗೃಹಲಕ್ಷಿ ಯೋಜನೆಯಡಿ ಅರ್ಹ ಮಹಿಳಾ ಕುಟುಂಬ ಮುಖ್ಯಸ್ಥರಿಗೆ ಮಾಸಿಕ 2ಸಾವಿರ ರೂ., ‘ಶಕ್ತಿ’ ಯೋಜನೆಯಡಿ ಸರಕಾರಿ ಸಾಮಾನ್ಯ ಬಸ್‍ಗಳಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಆಹಾರಧಾನ್ಯ ಹಾಗೂ ಯುವನಿಧಿ ಯೋಜನೆಯಡಿ ಅರ್ಹ ಪದವೀಧರರು ಮತ್ತು ಡಿಪ್ಲೊ ಮಾ ಪಡೆದವರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಜನರ ಕಲ್ಯಾಣಕ್ಕಾಗಿ ನಾವು ಈ ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದರು.
ಬರಗಾಲ ಬಂದಾಗ ರೈತರಿಗೆ ಆರ್ಥಿಕ ನೆರವು ನೀಡಬೇಕಾಗುತ್ತದೆ. ರೈತರೂ ಪ್ರತಿಭಟನೆ ನಡೆಸುತ್ತಾರೆ. ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವವರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ನಡುವೆ ನಾವು ಸಿಲುಕಿಕೊಂಡು ನಿರ್ವಹಿಸಲು ಕಷ್ಟಪಡುತ್ತಿದ್ದೇವೆ ಎಂದ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಸ್ಥಗಿತಗೊಳಿಸುವ ಯಾವುದೇ ಉದ್ದೇಶ ಸರಕಾರಕ್ಕಾಗಲಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗಾಗಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.