ಕೆ.ಎನ್. ರಾಜಣ್ಣ ಏಕೆ ಸಿಎಂ ಬದಲಾವಣೆ ಮಾಡಲು ಮುಂದಾಗಿದ್ದಾರೆ?: ಡಿ.ಕೆ.ಶಿವಕುಮಾರ್ ಪ್ರಶ್ನೆ
"ಮುಖ್ಯಮಂತ್ರಿ ಬದಲಾಗಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ"
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಮುಖ್ಯಮಂತ್ರಿ ಬದಲಾಗಬೇಕು’ ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ, ಮಾಜಿ ಸಚಿವರೂ ಆಗಿರುವ ಹಾಲಿ ಶಾಸಕ ಕೆ.ಎನ್.ರಾಜಣ್ಣ ಅವರು ಸಿಎಂ ಬದಲಾವಣೆ ಮಾಡಲು ಏಕೆ ಹೊರಟಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬುಧವಾರ ಇಲ್ಲಿನ ಕುಮಾರಕೃಪಾದಲ್ಲಿರುವ ತಮ್ಮ ಸರಕಾರಿ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಿಎಂ ಬದಲಾಗುವುದಾದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಿಎಂ ಆಗಬೇಕು ಎಂಬ ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಣ್ಣ ಅವರು ಸಿಎಂ ಬದಲಾವಣೆ ಮಾಡಲು ಏಕೆ ಹೊರಟಿದ್ದಾರೆ ಎಂದರು.
ಮುಖ್ಯಮಂತ್ರಿ ಮುಂದುವರಿಯಲಿ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ. ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದಾದರೆ ಮುಖ್ಯಮಂತ್ರಿ ಅಧಿಕಾರದಿಂದ ಇಳಿಯಬೇಕು ಎಂಬುದು ಅವರ ಮಾತಿನ ಅರ್ಥವೇ?. ಅಲ್ಲದೆ, ಸಿಎಂ ಬದಲಾಗಬೇಕು ಎಂದು ನಾನು ಎಂದಾದರೂ ಹೇಳಿದ್ದೀನಾ? ನಾನು ಎಲ್ಲೂ ಹೇಳಿಲ್ಲವಲ್ಲಾ. ರಾಜಣ್ಣ ಅವರೇ ಮುಖ್ಯಮಂತ್ರಿ ಬದಲಾವಣೆ ಮಾಡಲು ಮುಂದಾಗಿದ್ದಾರೆ. ನೀವು ಈ ಬಗ್ಗೆ ಅವರನ್ನೇ ಕೇಳಿ ಎಂದು ಅವರು ಉಲ್ಲೇಖಿಸಿದರು.
ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ತಡೆ ಗೋಡೆ ಕುಸಿತ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ, ಎಇ ಹಾಗೂ ಎಇಇ ಅಮಾನತುಗೊಳಿಸಲು ಶಿಫಾರಸ್ಸು ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಸ್ಪತ್ರೆ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದು, ಅಲ್ಲಿ ಗೋಡೆ ಬಲಪಡಿಸದೇ ಹೆಚ್ಚಿನ ಮಣ್ಣು ಸುರಿಯಲಾಗಿದೆ. ಈ ಕಾರಣಕ್ಕೆ ಗೋಡೆ ಕುಸಿದಿದೆ. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಯಾವ ಇಂಜಿನಿಯರ್ ಗಳಿಲ್ಲ. ನಾನು ಲೋಕೋಪಯೋಗಿ ಸಚಿವರು, ಸಿಎಂ ಜತೆ ಚರ್ಚೆ ಮಾಡುತ್ತೇವೆ ಎಂದರು.